ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಭ್‌ಮನ್ ಗಿಲ್, ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ಎದುರು ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 357 ರನ್ ಬಾರಿಸಿದ್ದು ಶ್ರೀಲಂಕಾಗೆ ಕಠಿಣ ಗುರಿ ನೀಡಿದೆ.
ವಾಂಖೇಡೆ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಇನಿಂಗ್ಸ್‌ನ ಎರಡನೇ ಎಸೆತದಲ್ಲೇ ನಾಯಕ ರೋಹಿತ್ ಶರ್ಮಾ(4) ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಮೊದಲ ಓವರ್‌ನಲ್ಲೇ ಇನ್‌ಫಾರ್ಮ್ ಬ್ಯಾಟರ್ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡ ಆರಂಭಿಕ ಆಘಾತಕ್ಕೊಳಗಾಗಿದ್ದ ಟೀಂ ಇಂಡಿಯಾಗೆ ಎರಡನೇ ವಿಕೆಟ್‌ಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಶುಭ್‌ಮನ್ ಗಿಲ್ ಆಸರೆಯಾದರು. ಈ ಜೋಡಿ 189 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.
ಶುಭ್‌ಮನ್ ಗಿಲ್ 92 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 92 ರನ್ ಬಾರಿಸಿ ಮಧುಶಂಕಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 49ನೇ ಏಕದಿನ ಶತಕದತ್ತ ದಾಪುಗಾಲಿಡುತ್ತಿದ್ದ ವಿರಾಟ್ ಕೊಹ್ಲಿ 88 ರನ್ ಬಾರಿಸಿ ಮಧುಶಂಕಗೆ ಮೂರನೇ ಬಲಿಯಾದರು.
4ನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಹಾಗೂ ಕೆ ಎಲ್ ರಾಹುಲ್ ಚುರುಕಿನ 60 ರನ್‌ಗಳ ಜತೆಯಾಟ ನಿಭಾಯಿಸಿದರು. ಈ ಜೋಡಿ ಕೇವಲ 47 ಎಸೆತಗಳನ್ನು ಎದುರಿಸಿ 60 ರನ್‌ಗಳ ಜತೆಯಾಟವಾಡಿತು. ಈ ವೇಳೆ ಕೆ ಎಲ್ ರಾಹುಲ್ 21 ರನ್ ಗಳಿಸಿ ದುಶ್ಮಂತ್ ಚಮೀರಾಗೆ ವಿಕೆಟ್ ಒಪ್ಪಿಸಿದರು.
ಅಯ್ಯರ್ ಇಂದು ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ಅಯ್ಯರ್ ಕೇವಲ 36 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು.ಅಂತಿಮವಾಗಿ ಅಯ್ಯರ್ 56 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 82 ರನ್ ಬಾರಿಸಿ ಮಧುಶಂಕಗೆ 5ನೇ ಬಲಿಯಾದರು.
ಕೊನೆಯಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಚುರುಕಿನ ಬ್ಯಾಟಿಂಗ್ ನಡೆಸಿ 24 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 35 ರನ್ ಬಾರಿಸಿ ಕೊನೆಯ ಎಸೆತದಲ್ಲಿ ರನೌಟ್ ಆದರು.