ರಮೇಶ್ ಜಾರಕಿಹೊಳಿಯನ್ನು ಅವಮಾನಿಸಿದವರನ್ನು ಕೂಡಲೇ ಬಂಧಿಸಲು ಎನ್.ರವಿಕುಮಾರ್ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬೆಂಗಳೂರು: ಬಿಜೆಪಿ ಮುಖಂಡ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಅವಮಾನ ಮಾಡುವ ಮತ್ತು ಅಗೌರವ ತೋರುವ ಪೋಸ್ಟರ್ ಅಂಟಿಸಿ ತೇಜೋವಧೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆಗ್ರಹಿಸಿದರು.

ಈ ಸಂಬಂಧ ಇಂದು ನಗರದ ಪೊಲೀಸ್ ಕಮಿಷನರ್ ಅವರಿಗೆ ದೂರು ಸಲ್ಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ರಮೇಶ್ ಜಾರಕಿಹೊಳಿ ಅವರು ಗೌರವಸ್ಥ ಕುಟುಂಬದಿಂದ ಬಂದಿದ್ದು, ಹಿಂದೆ ಸಚಿವ, ಶಾಸಕರಾಗಿ ಕೆಲಸ ಮಾಡಿದವರು. ಈ ಪೋಸ್ಟರ್ ಅಂಟಿಸುವ ಕಾರ್ಯದ ಹಿಂದೆ ಯಾರೋ ದೊಡ್ಡ ನಾಯಕರಿದ್ದಾರೆ ಎಂದು ಆರೋಪಿಸಿದರು.

ನಾಲ್ಕು ದಿನಗಳು ಕಳೆದರೂ ಪೋಸ್ಟರ್ ಅಂಟಿಸಿದವರನ್ನು ಬಂಧಿಸಿಲ್ಲ. ಸಿಸಿ ಕ್ಯಾಮೆರಾ, ತಂತ್ರಜ್ಞಾನ ಬಳಸಿ ಪೋಸ್ಟರ್ ಅಂಟಿಸಿದವರನ್ನು ಬಂಧಿಸಬೇಕು. ಇದರ ಹಿಂದೆ ಇರುವವರನ್ನು ಪತ್ತೆ ಮಾಡಲು ಆಗ್ರಹಿಸಿ ದೂರು ಕೊಡಲಾಗಿದೆ ಎಂದು ತಿಳಿಸಿದರು. ತನಿಖೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ ಎಂದರು.

ಆ ನಾಯಕ ಯಾರೆಂದು ಎಲ್ಲರಿಗೂ ಗೊತ್ತಿದೆ. ಅದು ತನಿಖೆಯಿಂದ ಹೊರಕ್ಕೆ ಬರಲಿ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು. ಸರಕಾರ ಈ ವಿಚಾರದಲ್ಲಿ ಸೂಕ್ಷ್ಮತೆ ಕಳೆದುಕೊಂಡಿದೆಯೇ ಎಂದು ಪ್ರಶ್ನಿಸಿದರು.

ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರು ಮಾತನಾಡಿ, ಪೋಸ್ಟರ್ ಅಂಟಿಸಿದವರನ್ನು ಕೂಡಲೇ ಬಂಧಿಸಿದರೆ ಆ ಮೂಲಕ ಇದರ ಹಿಂದಿರುವ ನಾಯಕನ ವಿವರ ಲಭಿಸಲಿದೆ ಎಂದು ತಿಳಿಸಿದರು. ವಕೀಲರಾದ ದೇವರಾಜ್, ರಾಜೇಶ ಎ, ಹೇಮಂತ ಬಿ, ಮಂಜುನಾಥ ಸಿ, ವಿಶ್ವಾಸ್ ಅವರು ಮನವಿ ಸಲ್ಲಿಸುವ ನಿಯೋಗದಲ್ಲಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!