ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡಿಕೆ ತೋಟದಲ್ಲಿ ಕೊನೆ ಕೊಯ್ಯುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಸನಗರದ ತ್ರಿಣಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡಳ್ಳಿಯಲ್ಲಿ ನಡೆದಿದೆ. ಅವಘಡದಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗ್ರಾಮದ ಪುಟ್ಟಸ್ವಾಮಿ (52) ಮೃತ ದುರ್ದೈವಿ. ಅವರು ಪರಿಚಯಸ್ಥರ ತೋಟದಲ್ಲಿ ಅಡಿಕೆ ಕೊನೆ ಕೊಯ್ಯುವಾಗ ಆಕಸ್ಮಿಕವಾಗಿ ದೋಟಿ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ವಿದ್ಯುತ್ ಪ್ರವಹಿಸಿ ಅವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಇವರ ಜೊತೆಗೆ ಕೆಲಸ ಮಾಡುತ್ತಿದ್ದ ರವಿ ಶೆಟ್ಟಿ (35) ಎಂಬುವವರು ಪುಟ್ಟಸ್ವಾಮಿಯವರನ್ನು ರಕ್ಷಿಸಲು ಯತ್ನಿಸಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ರವಿ ಶೆಟ್ಟಿಯವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

