ಹೊಸದಿಗಂತ ವರದಿ,ನಾಗಮಂಗಲ :
ಜಮೀನು ವಿವಾದ ಸಂಬಂಧ ಸ್ವಂತ ಅಣ್ಣನ ಮಗನನ್ನೇ ಪಿಸ್ತೂಲ್‌ನಿಂದ ಶೂಟ್ ಮಾಡಿ ಹತ್ಯೆಗೈದಿರುವ ಘಟನೆ ತಾಲೂಕಿನ ಗಡಿ ಗ್ರಾಮ ಬಿಂಡಿಗನವಿಲೆ ಹೋಬಳಿಯ ಹನುಮನಹಳ್ಳಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಸಂಭವಿಸಿದೆ.
ಹನುಮನಹಳ್ಳಿ ಗ್ರಾಮದ ವಾಸು ಎಂಬುವರ ಮಗ ಜಯಪಾಲ್(19) ಎಂಬುವರೇ ಸ್ವಂತ ಚಿಕ್ಕಪ್ಪನಿಂದಲೇ ಹತ್ಯೆಗೊಳಗಾಗಿರುವ ನತದೃಷ್ಟ ಯುವಕನಾಗಿದ್ದು, ರೌಡಿಶೀಟರ್ ಹಿನ್ನಲೆ ಹೊಂದಿರುವ ಕುಮಾರ್‌ಗೌಡ ಎಂಬಾತನೇ ಪಿಸ್ತೂಲ್‌ನಿಂದ ಶೂಟ್ ಅಣ್ಣನ ಮಗನನ್ನು ಹತ್ಯೆಗೈದು ಪರಾರಿಯಾಗಿರುವ ಆರೋಪಿಯಾಗಿದ್ದಾನೆ.
ಕುಮಾರ್‌ಗೌಡ ಮತ್ತು ಹನುಮನಹಳ್ಳಿ ಗ್ರಾಮದ ಬೇರೊಬ್ಬ ರೈತನ ಜೊತೆ ಜಮೀನು ವಿವಾದ ಉಂಟಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವಿವಾದಕ್ಕೆ ನನ್ನ ಅಣ್ಣ ವಾಸು ಮತ್ತವರ ಮಕ್ಕಳ ಕೈವಾಡವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದ ಕುಮಾರ್‌ಗೌಡ ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಗೆ ತನ್ನ ಅಣ್ಣ ವಾಸು ಮತ್ತು ಅವರ ಮಕ್ಕಳನ್ನು ಕರೆಸಿಕೊಂಡಿದ್ದಾನೆ. ಈ ವೇಳೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಕುಪಿತಗೊಂಡ ಕುಮಾರ್‌ಗೌಡ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಶೂಟ್ ಮಾಡಿದ ರಭಸಕ್ಕೆ ಜಯಪಾಲ್ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ.
ಘಟನೆ ಸಂಭವಿಸುತ್ತಿದ್ದಂತೆ ಕುಮಾರ್‌ಗೌಡ ಸ್ಥಳದಿಂದ ಪರಾರಿಯಾಗಿದ್ದಾನೆ.