ಹೊಸದಿಗಂತ ವರದಿ ಹಾವೇರಿ:
ರಾಜ್ಯದಲ್ಲಿ 45 ಲಕ್ಷಕ್ಕೂ ಹೆಚ್ಚು ಕಾರ್ಮಿಕರ ನೋಂದಣಿಯಾಗಿದ್ದು ಅದರಲ್ಲಿ 60-70ರಷ್ಟು ಕಾರ್ಡ್‌ಗಳು ಬೋಗಸ್ ಆಗಿವೆ. ಅವುಗಳ ಪತ್ತೆಗೆ ಆ್ಯಪ್ ಸಿದ್ದಪಡಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಜಿಲ್ಲೆಯ ಹಿರೇಕೆರೂರ ತಾಲೂಕಿನ ಶಾಸಕ ಯು.ಬಿ. ಬಣಕಾರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇವಲ 5 ಕೋಟಿ ಸೆಸ್ ಸಂಗ್ರಹವಾಗಿದ್ದು, 45 ಲಕ್ಷ ಕಾರ್ಮಿಕರಿಗೆ ಸೌಲಭ್ಯಗಳನ್ನು ಹೇಗೆ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.
ಸಾರಿಗೆ ಇಲಾಖೆಯಿಂದ ಎಲ್ಲ ಅಸಂಘಟಿತ ಚಾಲನಾ ಮತ್ತು ನಿರ್ವಾಹಕ ಸಿಬ್ಬಂದಿಗಳ ಸಾಮಾಜಿಕ ಭದ್ರತೆಗೆ ಶೇ.11ರಷ್ಟು ಸೆಸ್ ಸಂಗ್ರಹಿಸಿ ನಮ್ಮ ಇಲಾಖೆಗೆ ನೀಡಲು ಸಿಎಂ ಮತ್ತು ಸಾರಿಗೆ ಸಚಿವರು ಒಪ್ಪಿಗೆ ನೀಡಿದ್ದಾರೆ. ಇದರಿಂದ ಸುಮಾರು 50 ಲಕ್ಷ ಜನರಿಗೆ ಸೌಲಭ್ಯಗಳನ್ನು ನಿಡಬಹುದಾಗಿದೆ ಎಂದರು.
ಅಲ್ಲದೇ ನಮ್ಮ ಪಕ್ಷದ ಪ್ರಣಾಳಿಕೆಯಂತೆ ಹಾಗೂ ಪಕ್ಷದ ನೇತಾರ ರಾಹುಲ್ ಗಾಂದಿ ಹೇಳಿಕೆಯಂತೆ ಗಿಗ್ ವರ್ಕರ್ಸ್, ಆನ್‌ಲೈನ್ ಪ್ಲಾಟ್ ಫಾರ್ಮ್, ಮನೆಗೆಲಸದವರು, ಸಿನಿ ವರ್ಕರ್ಸ್ ಸಾಮಾಜಿಕ ಭದ್ರತೆಗೂ ನಮ್ಮ ಸರಕಾರ ಆದ್ಯತೆ ನೀಡಲಿದೆ ಎಂದರು.
ಈ ವೇಳೆ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕ ಯು.ಬಿ. ಬಣಕಾರ, ಮಾಜಿ ಸಂಸದ ಐ.ಜಿ. ಸನದಿ ಇದ್ದರು.