ಹೊಸದಿಗಂತ ವರದಿ ಕಲಬುರಗಿ:
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ದೇವತೆಗಳಿಗೆ ಹಾಗೂ ಹಿಂದೂ ದೇವರ ಮೂರ್ತಿಗಳನ್ನು ಅವಮಾನವೆಸಗುವ ಪ್ರಸಂಗಗಳು ಹೆಚ್ಚಾಗುತ್ತಿವೆ ಎಂದು ಹಿಂದೂ ಜಾಗೃತಿ ಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಸ್ವಾಧಿ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಹಲಕರ್ಟಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ ಮಾಡಿದ್ದು, ಅದೇ ರೀತಿ ಶಹಾಬಾದ್ ತಾಲೂಕಿನ ಮುತ್ತಗಾ ಗ್ರಾಮದ ಹೊರವಲಯದ ಕಂಠಿ ಬಸವೇಶ್ವರ ದೇವಸ್ಥಾನದಲ್ಲಿನ ನಂದಿ ಮೂರ್ತಿ ವಿರೂಪಗೊಳಿಸಿರುವುದು. ಮೊನ್ನೆ ತಾನೇ ಜಿಲ್ಲೆಯ ಯಡ್ರಾಮಿ ತಾಲೂಕಿನ ಅಂದೋಲಾ ಗ್ರಾಮಕ್ಕೆ ಹೋಗುವ ಹಾದಿಯಲ್ಲಿನ ಫ್ಲೆಕ್ಸ್ ನಲ್ಲಿನ ಶ್ರೀರಾಮನ, ಆಂಜನೇಯ ಭಾವಚಿತ್ರಕ್ಕೆ ಅಪಮಾನ ಮಾಡಿದ್ದು ಸಹಿಸಲಾಗುವುದಿಲ್ಲ ಎಂದರು.
ಈ ರೀತಿಯ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಕಾಣದ ಕೈಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಮುಂದೆ ಈ ರೀತಿ ಘಟನೆಗಳು ಜರುಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.