ಹೊಸ ದಿಗಂತ ವರದಿ, ಬಳ್ಳಾರಿ:
ಪ್ರಸಕ್ತ ವರ್ಷ ವರುಣ ಮುನಿಸಿಕೊಂಡಿದ್ದು, ಭೀಕರ ಬರ ಆವರಿಸಿದ ಹಿನ್ನೆಲೆ ಬಿಜೆಪಿ ಬರ ಅಧ್ಯಯನ ತಂಡ ಭಾನುವಾರ ಗಣಿನಾಡು ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿ, ಪರಿಶೀಲಿಸಿತು. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದ ಬರ ಅಧ್ಯಯನ ತಂಡ ಬಳ್ಳಾರಿ ತಾಲೂಕಿನ ಕೆ.ವೀರಾಪೂರ, ಚಳ್ಳಗುರ್ಕಿ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸಿರುಗುಪ್ಪ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ರೈತರೊಂದಿಗೆ ಚರ್ಚಿಸಿ, ಬರ ಕುರಿತು ಮಾಹಿತಿ ಪಡೆದರು. ಜೋಳ, ಭತ್ತ, ಮೆಕ್ಕೆಜೋಳ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ನೀರಿನ ಕೊರತೆಯಿಂದ ಹಾನಿಯಾಗಿರುವ ಕುರಿತು ರೈತರು ತಂಡದ ಸದಸ್ಯರಿಗೆ ವಿವಿರಿಸಿದರು.
ಕೇಂದ್ರದ ಮೇಲೆ ಗೂಬೆ ಬೇಡ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಪ್ರಸಕ್ತ ವರ್ಷ ಎಂದೂ ಕಾಣದಷ್ಟು ಭೀಕರ ಬರ ಆವರಿಸಿದ್ದು, ಬರ ಪರಿಹಾರ ವಿತರಿಸಲು ಕೇಂದ್ರ ಸಹಕರಿಸುತ್ತಿಲ್ಲ, ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ಇಲ್ಲಿವರೆಗೆ ಯಾವುದೇ ಸಚಿವರು, ಮುಖ್ಯಮಂತ್ರಿ ಹಾಗೂ ಡಿಸಿಎಂ ಬರ ಅಧ್ಯಯನ ಮಾಡಿಲ್ಲ, ವರದಿಯನ್ನು ನೀಡಿಲ್ಲ, ಬರ ಕುರಿತು ಅಧ್ಯಯನ ನಡೆಸಿ ಸರಿಯಾದ ವರದಿ ನೀಡಿದರೇ ಕೇಂದ್ರ ಖಂಡಿತ ಸ್ಪಂಧಿಸಲಿದೆ, ಪರಿಹಾರದ ಹಣವೂ ಬಿಡುಗಡೆಯಾಗಲಿದೆ, ಅದನ್ನು ಬಿಟ್ಟು ಕಾಂಗ್ರೆಸ್ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಹರಿಹಾಯ್ದರು.
ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಮೆಣಸಿನಕಾಯಿ, ಭತ್ತ, ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದು, ರೈತರಿಗೆ ನೀರಿನ ಭೀತಿ ಎದುರಾಗಿದೆ. ಐಸಿಸಿ ಸಭೆಯಲ್ಲಿ ಮೊದಲ ಬಾರಿಗೆ ಎಚ್ ಎಲ್ ಸಿ ಕಾಲುವೆಗೆ ನ.30 ರ ವರೆಗೆ ನೀರು ಹರಿಸಲಾಗುವುದು ಎಂದು ಹೇಳಿದ್ದರು.
ನಂತರ ಬೆಂಗಳೂರು ನಗರದಲ್ಲಿ ದಿಢೀರ್ ಐಸಿಸಿ ಸಭೆ ನಡೆಸಿ ನ.10ರ ವರೆಗೆ ಮಾತ್ರ ನೀರು ಹರಿಸಲಾಗುವುದು ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ, ಇದು ರೈತರಲ್ಲಿ ಗೊಂದಲವನ್ನುಂಟು ಮಾಡಿದೆ. ಜಲಾಶಯದಲ್ಲಿ ನೀರಿಲ್ಲ ಎಂದು ಸಬೂಬು ನೀಡದೇ ಜಲಾಶಯ ಆಶ್ರಿತ ರೈತರಿಗೆ ನೀರಿನ ಲಭ್ಯತೆ ಇರುವವರೆಗೂ ಹರಿಸಲು ಮುಂದಾಗಬೇಕು, ನೀರು ಕಡಿಮೆ ಎನ್ನುವದಾದರೇ ಕಾರ್ಖಾನೆಗಳಿಗೆ ಬಂದ್ ಮಾಡಿ, ಕಾಲುವೆಗೆ ಹರಿಸಿ, ರೈತರು ಬದುಕಬೇಕು, ಇಲ್ಲದಿದ್ದರೇ ನಷ್ಟ ಅನುಭವಿಸಿ, ಸಾಲದ ಸುಳಿಗೆ ಸಿಲುಕಲಿದ್ದಾರೆ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸಿರುಗುಪ್ಪ ಕ್ಷೇತ್ರದ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಕನಕಗಿರಿ ಕ್ಷೇತ್ರದ ಮಾಜಿ ಶಾಸಕ ಬಸವರಾಜ್ ಧಡೆಸ್ಗೂರು, ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳ್, ಕೆ.ರಾಮಲಿಂಗಪ್ಪ, ವಿರುಪಾಕ್ಷಗೌಡ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಜಿಲ್ಲಾಧ್ಯಕ್ಷ ಪ್ರಕಾಶ್ ಗೌಡ, ಉಪಾಧ್ಯಕ್ಷ ಗಾಳಿ ಶಂಕ್ರಪ್ಪ ಸೇರಿದಂತೆ ವಿವಿಧ ರೈತ ಮುಖಂಡರು, ಪಕ್ಷದ ವಿವಿಧ ಪ್ರಮುಖರು ಉಪಸ್ಥಿತರಿದ್ದರು.