ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಸೇರಿದಂತೆ ಕೇಂದ್ರ ಸರ್ಕಾರ ನೀಡುವ ನಾಗರಿಕ ಪ್ರಶಸ್ತಿಗಳು ಅಧಿಕೃತ ಪದವಿಗಳಲ್ಲ ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇಂತಹ ಗೌರವಗಳನ್ನು ಪ್ರಶಸ್ತಿದಾರರ ಹೆಸರಿನ ಮುಂದೆ ಅಥವಾ ಹಿಂದೆ ಜೋಡಿಸಿ ಬಳಸಲು ಕಾನೂನು ಮಾನ್ಯತೆ ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಪದ್ಮಶ್ರೀ ಡಾ. ಶರದ್ ಎಂ. ಹರ್ಡೀಕರ್ ಸಂಬಂಧಿಸಿದ ರಿಟ್ ಅರ್ಜಿಯ ವಿಚಾರಣೆ ವೇಳೆ, ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸೋಮಶೇಖರ್ ಸುಂದರೇಶನ್ ಈ ತೀರ್ಪು ನೀಡಿದ್ದಾರೆ. ಈ ನಿರ್ಣಯ ಹೊಸದಲ್ಲ ಎಂದು ತಿಳಿಸಿದ ನ್ಯಾಯಾಲಯ, 1995ರಲ್ಲಿ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ಪುನರುಚ್ಚರಿಸಿದೆ. ಆ ತೀರ್ಪಿನಂತೆ ನಾಗರಿಕ ಪ್ರಶಸ್ತಿಗಳನ್ನು ವ್ಯಕ್ತಿಯ ಹೆಸರಿನ ಭಾಗವಾಗಿ ಬಳಸಬಾರದು ಎಂಬ ನಿಯಮ ಈಗಲೂ ಅನ್ವಯಿಸುತ್ತದೆ ಎಂದು ಕೋರ್ಟ್ ತಿಳಿಸಿದೆ.
ಡಾ. ತ್ರಂಬಕ್ ವಿ. ದಾಪಕೇಕರ್ ವಿರುದ್ಧ ಪದ್ಮಶ್ರೀ ಡಾ. ಶರದ್ ಎಂ. ಹರ್ಡೀಕರ್ ಪ್ರಕರಣದ ವೇಳೆ, ಹೆಸರು ಜೊತೆಗೆ ‘ಪದ್ಮಶ್ರೀ’ ಬಳಕೆಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು. ನಾಗರಿಕ ಪ್ರಶಸ್ತಿಗಳು ಗೌರವ ಸೂಚಕ ಮಾತ್ರ, ಪದವಿಗಳಂತೆ ಬಳಸಲು ಅವಕಾಶವಿಲ್ಲ ಎಂದು ನ್ಯಾಯಮೂರ್ತಿ ಸ್ಪಷ್ಟಪಡಿಸಿದರು.
ಆದರೆ ಮಾಧ್ಯಮ ವರದಿಗಳಲ್ಲಿ ಅಥವಾ ಸಾಮಾನ್ಯ ಬಳಕೆಯಲ್ಲಿ ಪ್ರಶಸ್ತಿಯ ಉಲ್ಲೇಖಕ್ಕೆ ನಿರ್ಬಂಧವಿಲ್ಲ. ಕೋರ್ಟ್ ದಾಖಲೆಗಳು ಮತ್ತು ಅಧಿಕೃತ ಪತ್ರಗಳಲ್ಲಿ ಮಾತ್ರ ಇಂತಹ ಪ್ರಶಸ್ತಿಗಳನ್ನು ಹೆಸರಿನ ಜೊತೆ ಬಳಸಬಾರದು ಎಂಬುದೇ ತೀರ್ಪಿನ ಸಾರವಾಗಿದೆ.

