ಆರ್.ಡಿ. ಪಾಟೀಲ್ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ- ಸಚಿವ ಪ್ರಿಯಾಂಕ್ ಖರ್ಗೆ

ಹೊಸದಿಗಂತ ವರದಿ ಕಲಬುರಗಿ:

ಕೆಇಎ ಪರೀಕ್ಷೆಯ ಪ್ರಕರಣದ ಪ್ರಮುಖ ಆರೋಪಿ ಆರ್ ಡಿ ಪಾಟೀಲ್ ಬಂಧನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಒಂದು ಮೊಬೈಲ್ ಸಿಕ್ಕಿದ್ದು,ಅದನ್ನು ವಿಧಿವಿಜ್ಞಾನ‌ ಸಂಸ್ಥೆಗೆ ಕಳಿಸಲಾಗಿದೆ.ತನಿಖೆ ನಡೆಯುತ್ತಿದೆ, ವರದಿ ಬರಲಿ. ಈ ಹಂತದಲ್ಲಿ ಎಲ್ಲ ಮಾಹಿತಿಯನ್ನು ಬಹಿರಂಗಗೊಳಿಸಲಾಗದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬುಧವಾರ ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವೊಮ್ಮೆ ಮಾಹಿತಿ ಸಿಗಲ್ಲ ಕೆಲವೊಮ್ಮೆ ಮಾಹಿತಿ ಕೊಟ್ಟರೂ ಕೂಡಾ ಕಾರಣಾಂತರಗಳಿಂದ ಮಾಡಲಾಗಿರುವುದಿಲ್ಲ. ಕೆಲವೊಮ್ಮೆ ನಮ್ಮವರೇ ಶಾಮೀಲಾಗಿರುತ್ತಾರೆ. ಆದರೆ, ನಮ್ಮವರು ಶಾಮೀಲಾಗಿರುವುದು ಕಂಡುಬಂದರೇ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.ಹೀಗಾಗಿ ಈಗ ತನಿಖೆ ನಡೆಯುತ್ತಿದೆ. ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಸರ್ಕಾರ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದರು.

ಸರ್ಕಾರಕ್ಕೆ ಯುವಕರ ಭವಿಷ್ಯದ ಬಗ್ಗೆ ಬದ್ಧತೆ ಇದೆ.ಈ ಹಿಂದೆ ಅಂತಿಮ ಪಟ್ಟಿ ಪ್ರಕಟಣೆ ಆದ 7 ತಿಂಗಳ ಮೇಲೆ ಸರ್ಕಾರ ಎಚ್ಚೆತ್ತುಕೊಂಡಿತ್ತು.ಆದರೆ, ಈಗ ಇಲ್ಲಿ ಹಾಗಾಗಿಲ್ಲ‌. ಯುವಕರ ಭವಿಷ್ಯಕ್ಕಾಗಿ Prevention of Corruption in Government Recruitment ಬಿಲ್ ತಯಾರಿಸುತ್ತಿದ್ದೇವೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ಖಾಸಗಿ ಬಿಲ್ ಮೂವ್ ಮಾಡಿದ್ದೆ‌. ಈ ಬಗ್ಗೆ ಸಿಎಂ ಅವರೊಂದಿಗೆ ಚರ್ಚಿಸಲಾಗಿದೆ. ಅದು ಈಗಾಗಲೇ ಕಾನೂನು ಸಚಿವರ ಒಪ್ಪಿಗೆ ನಂತರ ಡಿಪಿಆರ್ ಗೆ ಕಳಿಸಿದ್ದಾರೆ. ಸಿಎಂ ಅವರು ಡಿಪಿಆರ್ ತರಿಸಿಕೊಂಡು ಮಂಜೂರು ಮಾಡಿದರೆ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಕಿಯೋನಿಕ್ಸ್ ನಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಜೆಪಿಯವರಿಗೆ ಮಾಡಲು‌ ಕೆಲಸ ಇಲ್ಲ. ಅವರು ಯಾರೋ ಹೇಳಿದ್ದನ್ನು ಕೇಳುತ್ತಾರೆ. ಸುಳ್ಳಿನ‌ ಕಾರ್ಖಾನೆ ತೆಗೆದಿದ್ದಾರೆ. ಐಟಿ ಸೆಲ್ ನವರಹ ವಾಟ್ಸಪ್ ನಲ್ಲಿ ಏನು ಹಾಕುತ್ತಾರೋ ಅದನ್ನೇ ನಂಬುತ್ತಾರೆ.ಯಾವುದೇ ಪ್ರಕರಣದ ಕುರಿತಂತೆ ಆಳವಾದ ಅಧ್ಯಯನ ಮಾಡುವುದನ್ನು ಬಿಜೆಪಿ ಕಲಿಯಲಿ. ನಾಳೆ ಬೆಂಗಳೂರಿನಲ್ಲಿ ಈ ಬಗ್ಗೆ ಪ್ರೆಸ್ ಮೀಟ್ ಮಾಡಲಿದ್ದೇನೆ. ಆಗ ಯಾರು ರಾಜೀನಾಮೆ ನೀಡಬೇಕಾಗಬಹುದು ಎನ್ನುವ ಸಂಗತಿ‌ ಹೊರಬಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!