ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡ ನಟಿ ಸಮಂತಾ, ಮೈಯೋಸಿಟಿಸ್ ಚಿಕಿತ್ಸೆಗಾಗಿ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಆಂಗ್ಲ ಔಷಧಿಯನ್ನು ಬಳಸುತ್ತಲೇ ಮತ್ತೊಂದೆಡೆ ಸಮಂತಾ ಆಯುರ್ವೇದ ಮತ್ತು ವಿವಿಧ ಹೊಸ ಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಹಾಗೆಯೇ ಮನಸ್ಸಿನ ಆನಂದಕ್ಕಾಗಿ ಪ್ರಕೃತಿಯನ್ನು ಆಸ್ವಾದಿಸುತ್ತಿದ್ದಾರೆ. ಈಗಾಗಲೇ ಕೊಯಮತ್ತೂರು ಈಶಾ ಫೌಂಡೇಶನ್, ಬಾಲಿ, ಅಮೇರಿಕಾ, ಆಸ್ಟ್ರಿಯಾ, ಇಟಲಿ… ಹೀಗೆ ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟ ಸ್ಯಾಮ್ ಈಗ ಭೂತಾನ್‌ನಲ್ಲಿದ್ದಾರೆ.
ಭೂತಾನ್‌ನಲ್ಲಿರುವ ಸಮಂತಾ, ಆಯುರ್ವೇದ ಚಿಕಿತ್ಸೆಯನ್ನು ಪ್ರಯತ್ನಿಸಿದ್ದಾರೆ. ಭೂತಾನ್ ಆಯುರ್ವೇದದಲ್ಲಿ ಬಿಸಿ ಕಲ್ಲಿನ ಸ್ನಾನ ಎಂದು ಕರೆಯಲ್ಪಡುವ ಚಿಕಿತ್ಸೆಯನ್ನು ಪಡೆದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಈ ಬಿಸಿ ಕಲ್ಲಿನ ಸ್ನಾನ ಟಿಬೆಟಿಯನ್ ಆಯುರ್ವೇದದಲ್ಲಿ ಬಹಳ ಜನಪ್ರಿಯವಾಗಿದೆ. ಭಾರತದಿಂದ ಬಂದ ಆಯುರ್ವೇದ ವಿಧಾನಗಳಿಂದ ಇದನ್ನು ಕಂಡುಹಿಡಿಯಲಾಯಿತು. ಇದರಲ್ಲಿ ಕೆಂಪಾ ಎಂಬ ಮೂಲಿಕೆಯನ್ನು ಸಹ ಬಳಸಲಾಗುತ್ತದೆ. ಗಿಡಮೂಲಿಕೆಗಳು ಈ ಬಿಸಿ ನೀರಿನಲ್ಲಿ ಕರಗಿ ಸ್ನಾನ ಮಾಡುವುದರಿಂದ ಶಕ್ತಿ, ದೇಹ ನೋವು, ಸುಸ್ತು, ಹೊಟ್ಟೆನೋವು, ಕೀಲು ನೋವು, ಮೂಳೆ ದೌರ್ಬಲ್ಯ…ಇವೆಲ್ಲ ಮಾಯವಾಗುತ್ತವೆ ಎಂದು ಸಮಂತಾ ತಾವು ತೆಗೆದುಕೊಳ್ಳುತ್ತಿರುವ ಚಿಕಿತ್ಸೆಯ ಬಗ್ಗೆ ಹೇಳಿದ್ದಾರೆ.
ಭೂತಾನ್‌ನಲ್ಲಿ ಈ ಆಯುರ್ವೇದ ಚಿಕಿತ್ಸೆಗಳನ್ನು ತೆಗೆದುಕೊಳ್ಳುವಾಗ, ಸಮಂತಾ ಕೈಮಗ್ಗ ಕೈಗಾರಿಕೆಗಳು, ನೈಸರ್ಗಿಕ ಸ್ಥಳಗಳು ಮತ್ತು ಬುದ್ಧನ ದೇವಾಲಯಗಳಿಗೆ ಭೇಟಿ ನೀಡಿದರು.