ಏಲಕ್ಕಿ ನಾಡಲ್ಲಿ ಹೋರಿ ಹಬ್ಬಕ್ಕೆ ಭರ್ಜರಿ ತಯಾರಿ- ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಿರಣ ಮಾಸಣಗಿ

ಹಾವೇರಿ: ಮುಂಗಾರು ವಿಫಲತೆಯಿಂದ ಕಂಗೆಟ್ಟಿದ್ದ ರೈತರಿಗೆ ಇದೀಗ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಬೆಳೆ ವಿಮೆಯ ಶೇ.25ರಷ್ಟನ್ನು ಮಧ್ಯಂತರ ಪರಿಹಾರವಾಗಿ ಜಿಲ್ಲೆಯ ರೈತರ ಖಾತೆಗೆ ಹಣ ಜಮಾ ಮಾಡಲಾಗುತ್ತಿದ್ದು, ದೀಪಾವಳಿ ಹೊತ್ತಿಗೆ ಇದು ಅನ್ನದಾತರ ಆತ್ಮಸೈರ್ಯ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಕೆಲವೇ ದಿನಗಳು ದೀಪಾವಳಿ ಸಂಭ್ರಮಕ್ಕೆ ಬಾಕಿ ಇರುವಾಗ ಇದೀಗ ಮಾರುಕಟ್ಟೆಯಲ್ಲಿ ಕಲರವ ಶುರುವಾಗಿದೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ದೀಪಾವಳಿ ಬಂತೆಂದರೆ ಹಟ್ಟಿಹಬ್ಬ, ಕೊಬ್ಬರಿ ಹೋರಿ, ಹೋರಿ ಹಬ್ಬ ಹೀಗೆ ಹಲವು ಹೆಸರುಗಳಿಂದ ಸಂಭ್ರಮದಿಂದ ದೀಪಾವಳಿ ಆಚರಿಸಲಾಗುತ್ತಿದೆ. ಇದೀಗ ಕೆಲವೇ ದಿನಗಳು ಹಬ್ಬಕ್ಕೆ ಬಾಕಿ ಇದ್ದು, ಮಾರುಕಟ್ಟೆಯಲ್ಲಿ ತರಕಾರಿ, ದಿನಸಿ ವಸ್ತುಗಳು, ದಿನೋಪಯೋಗಿ ವಸ್ತುಗಳು, ಹೊಸ ಬಟ್ಟೆ, ವಾಹನಗಳ ಖರೀದಿ ಭರಾಟೆ ಜಿಲ್ಲಾದ್ಯಂತ ಜೋರಾಗಿದೆ.

ಹಿರಿಯರ ಪೂಜೆ:
ಬಹುತೇಕ ಇಡೀ ವರ್ಷ ಮೈಮುರಿಯುವಂತೆ ದುಡಿಯುವ ರೈತ ವರ್ಗ, ದೀಪಾವಳಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸುವುದು ವಾಡಿಕೆ. ಅಲ್ಲದೇ ದೀಪಾವಳಿ ಅಮವಾಸ್ಯೆಯಂದು ಹಿರಿಯರ ಹಬ್ಬ ಆಚರಿಸಲಾಗುತ್ತಿದ್ದು, ಕುಟುಂಬದ ಹಿರಿಯರಿನ್ನು ನೆನೆದು ಗೌರವಿಸಿ ಪೂಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತು ಕುಟುಂಬದ ಎಲ್ಲ ಸದಸ್ಯರಿಗೆ ಎಣ್ಣೆಮಜ್ಜನ ಮಾಡಿಕೊಂಡು, ಹೊಸಬಟ್ಟೆ ಧರಿಸುವ ಮೂಲಕ ಇಡೀ ವರ್ಷವನ್ನು ಖುಷಿ, ಲವಲವಿಕೆಯಿಂದ ಕಳೆಯುವಂತೆ ಹಿರಿಯರು ಕಿರಿಯರಿಗೆ ಆಶೀರ್ವದಿಸುತ್ತಾರೆ.

ಜೋರಾದ ಹೋರಿ ಹಬ್ಬದ ತಯಾರಿ:
ದಕ್ಷಿಣ ಕನ್ನಡದಲ್ಲಿ ಕಂಬಳ, ತಮಿಳುನಾಡಿನಲ್ಲಿ ಆಚರಿಸುವ ಜಲ್ಲಿಕಟ್ಟು ಮಾದರಿಯಲ್ಲಿ ಉತ್ತರ ಕರ್ನಾಟಕದ ಗಂಡುಮೆಟ್ಟಿನ ಕ್ರೀಡೆ ಎಂದೇ ಖ್ಯಾತವಾದ ಹೋರಿ ಹಬ್ಬ ಅಥವಾ ಕೊಬ್ರಿ ಹೋರಿ ಬಿಡುವ ಮೈನವಿರೇಳಿಸುವ ಕ್ರೀಡೆಗೆ ಇದೇ ದೀಪಾವಳಿಯಿಂದ ಅಧಿಕೃತ ಚಾಲನೆ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಹೋರಿಗಳಿಗೆ ಅಗತ್ಯವಾದ ಅಲಂಕಾರಿಕ ಸಾಮಗ್ರಿಗಳ ವ್ಯಾಪಾರ ಎಲ್ಲರ ಕಣ್ಸೆಳೆಯುವಂತಿತ್ತು.

ಬಹುತೇಕ ದೀಪಾವಳಿ ವೇಳೆ ಮಕ್ಕಾಡ (ಮುಖಗವಸು), ಹೂವಿನ ಕೊಂಬರಸ, ಕಾಲ್ಗೆಜ್ಜೆ, ಕೊರಳಗೆಜ್ಜೆ, ಹಣೆಪಟ್ಟಿ, ಮಾಲೆ, ಜೂಲ, ಸೆರಗಿನ ಸರ, ಮೂಗುದಾರ, ಕರೆ ಉಣ್ಣಿ ಮಾಲೆ, ಹಗ್ಗ, ಗೆಜ್ಜೆಸರ ಹೀಗೆ ತರಾವರಿ ಸಾಮಗ್ರಿಗಳನ್ನು ಕೃಷಿಕರು ವರ್ಷವೀಡಿ ತಮ್ಮ ಎಲ್ಲ ಜಾನುವಾರು ಹಾಗೂ ಕೃಷಿ ಕಾರ್ಯಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಇದೇ ವೇಳೆ ಖರೀದಿಸುತ್ತಾರೆ.

ಪ್ರತಿಷ್ಠೆಯ ಕ್ರೀಡೆ:
ವಿಶೇಷವೆಂದರೆ, ಬಹುತೇಕ ಪ್ರತಿ ಗ್ರಾಮಗಳಲ್ಲಿ ಸುಮಾರು 30-50 ಜಾನುವಾರುಗಳನ್ನು ಹೋರಿ ಹಬ್ಬಕ್ಕೆಂದೆ ಮೀಸಲಿಟ್ಟು ಅದನ್ನು ಕಟ್ಟುಮಸ್ತಾಗಿ ಬೆಳೆಸುತ್ತಾರೆ. ಅದರ ಆರೈಕೆ, ಪೋಷಣೆಗೆ ವಿಶೇಷ ಆಸ್ಥೆ ವಹಿಸುವ ಆ ಕುಟುಂಬಗಳು, ಯಾವುದಾದರೂ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಅದು ಗೆದ್ದು ಬಂದರೆ ಇಡೀ ಗ್ರಾಮದಲ್ಲಿ ಅದನ್ನು ನವವಧುವಿನಂತೆ ಶೃಂಗರಿಸಿ ಮೆರವಣಿಗೆ ಮಾಡುವ ಮೂಲಕ ಇಡೀ ಗ್ರಾಮಕ್ಕೆ ಈ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ. ಇದೊಂದು ಪ್ರತಿಷ್ಠೆಯಾಗಿಯೂ ಇಂದಿಗೂ ಹಲವು ಕುಟುಂಬಗಳನ್ನು ಇದನ್ನು ಪಾಲನೆ ಪೋಷಣೆ ಮಾಡಿಕೊಂಡು ಬರುತ್ತಿವೆ.

ಸಾಮರ್ಥ್ಯ ಪ್ರದರ್ಶನ:
ಹಟ್ಟಿ ಹಬ್ಬ ಕೃಷಿಕರ ಪಾಲಿಗೆ ಸಂಭ್ರಮ ಕಟ್ಟಿಕೊಡುವ ಹಬ್ಬ. ಹೋರಿ ಹಬ್ಬ ಇದರ ಪ್ರಮುಖ ಆಕರ್ಷಣೆ. ಇತ್ತೀಚಿನ ದಿನಗಳಲ್ಲಿ ಇದರ ಚಾಕಚಕ್ಯತೆ ಅರಿವಿಲ್ಲದವರು ಹೋರಿ ಹಿಡಿಯಲು ಹೋಗಿ ಆಘಾತಕ್ಕೀಡಾಗುತ್ತಿದ್ದಾರೆ. ಇದು ಸಾಮರ್ಥ್ಯ ಪ್ರದರ್ಶನದ ದ್ಯೋತಕ. ಅಂತೆಯೇ ಜಿಲ್ಲೆಯ ಹಾನಗಲ್‌ನಲ್ಲಿ ಅಂತಾರಾಷ್ಟ್ರೀಯ ಹೋರಿ ಹಬ್ಬ ನಡೆಸುವುದನ್ನು ಸ್ಮರಿಸಬಹುದು ಎಂದು ಯತ್ತಿನಹಳ್ಳಿಯ ನೀಲನಗೌಡ್ರ ಪಾಟೀಲ ತಿಳಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!