ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಯಾಲಯದ ಸ್ಪಷ್ಟ ನಿರ್ದೇಶನಗಳಿದ್ದರೂ ಮುರುಘಾಶ್ರೀ ಮಠದ ಆಸ್ತಿಯನ್ನು ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಚಿತ್ರದುರ್ಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮುರುಘಾಶ್ರೀ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದ ಸಂದರ್ಭದಲ್ಲಿ, ಮಠದ ಆಡಳಿತದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ, ಅದನ್ನು ಉಲ್ಲಂಘಿಸಲಾಗಿದೆ ಎನ್ನಲಾಗುತ್ತಿದೆ.
ಮಠದ ಭಕ್ತ ಪ್ರಕಾಶ್ ನೀಡಿರುವ ದೂರಿನ ಪ್ರಕಾರ, 2025ರ ಅಕ್ಟೋಬರ್ 6ರಂದು ಹೊಸದುರ್ಗ ತಾಲ್ಲೂಕಿನಲ್ಲಿ ಇರುವ ಸುಮಾರು 2 ಕೋಟಿ ರೂ. ಮೌಲ್ಯದ ನಾಲ್ಕು ನಿವೇಶನಗಳನ್ನು ಮಂಜುನಾಥ್ ಎಂಬ ವ್ಯಕ್ತಿಗೆ ಸ್ಪೆಷಲ್ ಜಿಪಿಎ ಮೂಲಕ ಮಾರಾಟ ಮಾಡಲಾಗಿದೆ. ಈ ವಹಿವಾಟು ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ ಎಂಬುದು ಅವರ ಆರೋಪ.
ಇದನ್ನೂ ಓದಿ:
ಶಿವಮೂರ್ತಿ ಮುರುಘಾ ಶರಣರು ಮೊದಲ ಪೋಕ್ಸೊ ಪ್ರಕರಣದಲ್ಲಿ ಖುಲಾಸೆಯಾಗಿದ್ದು, ಇನ್ನೊಂದು ಪ್ರಕರಣ ಇನ್ನೂ ನ್ಯಾಯಾಲಯದ ವಿಚಾರಣೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಮಠಕ್ಕೆ ಆಡಳಿತ ಸಮಿತಿಯನ್ನು ನೇಮಿಸಿದೆ. ಆದರೆ ಆ ಸಮಿತಿಯ ಗಮನಕ್ಕೆ ಬಾರದೆ ಮಠದ ಆಸ್ತಿ ಮಾರಾಟವಾಗಿರುವುದು ಅತ್ಯಂತ ಗಂಭೀರ ವಿಷಯ ಎಂದು ದೂರುದಾರರು ಹೇಳಿದ್ದಾರೆ.
ಈ ಕುರಿತು ಆಡಳಿತ ಸಮಿತಿ ಅಧ್ಯಕ್ಷ ಶಿವಯೋಗಿ ಕಳಸದ್ ಪ್ರತಿಕ್ರಿಯಿಸಿ, ಆರೋಪಗಳ ಬಗ್ಗೆ ಕಾನೂನು ತಜ್ಞರಿಂದ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

