ಹೊಸದಿಗಂತ ವರದಿ,ಬಾಗಲಕೋಟೆ :
ನಮ್ಮ ಪಕ್ಷದ ಹಿರಿಯರು, ಕೇಂದ್ರ ನಾಯಕರು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಬಿ ವೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದ್ದು ಪಕ್ಷದ ಸಂಘಟನೆಯ ದೃಷ್ಟಿಯಿಂದ ಅತ್ಯುತ್ತಮ ನಿರ್ಣಯ. ನನ್ನ ಸಹೋದರ ಸಮನಾದ ಬಿ ವೈ ವಿಜಯೆಂದ್ರ ಅವರನ್ನು ನಾನು ಈ ಸಂದರ್ಭದಲ್ಲಿ ತುಂಬು ಹೃದಯದ ಅಭಿನಂದಿಸುತ್ತೇನೆ.ಅವರ ಅವಧಿಯಲ್ಲಿ ರಾಜ್ಯ ಬಿಜೆಪಿಯು ಯಶಸ್ಸಿನ ದಾರಿಯಲ್ಲಿ ಸಾಗಲಿ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿಯವರ ಕೈ ಬಲಪಡಿಸುವ ಜೊತೆಗೆ ಸ್ಥಳೀಯ ಚುನಾವಣೆಗಳಲ್ಲಿಯೂ ಬಿಜೆಪಿ ಉತ್ತಮ ನಿರ್ವಹಣೆ ತೋರಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಮಾಜಿ ಸಚಿವ ಮುರಗೇಶ ನಿರಾಣಿ ತಿಳಿಸಿದ್ದಾರೆ.
ವಿಜಯೇಂದ್ರ ಅವರು ಯುವ ಮೋರ್ಚಾ ಅಧ್ಯಕ್ಷರಾಗಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಿದ್ದಾರೆ. ಯುವ ಜನತೆಗೆ ನಾಡಿಮಿಡಿತ ಅರಿತು ಉತ್ಸಾಹ ತುಂಬಿ ಪಕ್ಷ ಬಲಪಡಿಸಿದ್ದಾರೆ. ಅವರ ಹಿಂದೆ ಹಿರಿಯ ಕಾರ್ಯಕರ್ತರು ಅಷ್ಟೇ ಅಲ್ಲದೇ ರಾಜ್ಯದ ಉತ್ಸಾಹಿ ಯುವಪಡೆ ಇದೆ. ಕರುನಾಡಿನ ಪ್ರಶ್ನಾತೀತ ನಾಯಕ ಯಡಿಯೂರಪ್ಪ ಅವರ ಪುತ್ರ ಸಂಘಟನಾ ಚತುರ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರಿಂದ ಪಕ್ಷಕ್ಕೆ ಆನೆ ಬಲಬಂದಂತಾಗಿದೆ. ಅವರಿಗೆ ಇಡೀ ರಾಜ್ಯ ಬಿಜೆಪಿ ನಾಯಕರು, ಕಾರ್ಯಕರ್ತರು ಮನಃಪೂರ್ವಕವಾಗಿ ಸಹಕಾರ ನೀಡಲಿದ್ದಾರೆ. ವಿಜಯೇಂದ್ರ ಅವರ ನಾಯಕತ್ವದಲ್ಲಿ ಬಿಜೆಪಿಗೆ ಒಳ್ಳೆಯ ಭವಿಷ್ಯವಿದೆ ಎಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.