ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಹೊಸ ಚಿಂತನೆಯ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯನ್ನು ಉದಾಹರಣೆಯಾಗಿ ಉಲ್ಲೇಖಿಸಿ, ಇಲ್ಲಿ ವಿಜ್ಞಾನ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ಸೃಜನಶೀಲತೆ ಹೆಚ್ಚಿಸಲು ಸಂಗೀತ ತರಗತಿಗಳನ್ನೂ ನಡೆಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜ್ಞಾನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಒಟ್ಟಿಗೆ ಬೆಳೆಯಬಹುದು ಎಂಬುದಕ್ಕೆ ಐಐಎಸ್ಸಿ ಜೀವಂತ ಸಾಕ್ಷಿಯಾಗಿದೆ ಎಂದರು.
2025ನೇ ವರ್ಷ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣಗಳನ್ನು ನೀಡಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಭದ್ರತೆ, ಕ್ರೀಡೆ, ವಿಜ್ಞಾನ ಹಾಗೂ ಜಾಗತಿಕ ವೇದಿಕೆಗಳಲ್ಲಿ ಭಾರತ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ ಎಂದು ಹೇಳಿದರು. ಆಪರೇಷನ್ ಸಿಂಧೂರ್ ಉಲ್ಲೇಖಿಸಿದ ಅವರು, ದೇಶದ ಭದ್ರತೆಯ ವಿಚಾರದಲ್ಲಿ ಭಾರತ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದೆ ಎಂದರು.
ಇದನ್ನೂ ಓದಿ:
ಕ್ರೀಡಾ ಕ್ಷೇತ್ರದಲ್ಲಿ ಪುರುಷರ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿದರೆ, ಮಹಿಳಾ ತಂಡ ಮೊದಲ ಬಾರಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಮಹಿಳಾ ಅಂಧರ ಕ್ರಿಕೆಟ್ ವಿಶ್ವಕಪ್ ವಿಜಯವೂ ದೇಶಕ್ಕೆ ಗೌರವ ತಂದಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯ ಶುಭಾಂಶು ಶುಕ್ಲಾರ ಸಾಧನೆ ಹಾಗೂ ಪರಿಸರ–ವನ್ಯಜೀವಿ ಸಂರಕ್ಷಣಾ ಕ್ರಮಗಳು 2025ನ್ನು ವಿಶೇಷ ವರ್ಷವನ್ನಾಗಿಸಿದೆ ಎಂದು ಪ್ರಧಾನಿ ಹೇಳಿದರು.

