ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕ: ಕಟೌಟ್‌ಗೆ ಕ್ಷೀರಾಭಿಷೇಕ, ಪಟಾಕಿ ಸಿಡಿಸಿ ಸಂಭ್ರಮ

ಹೊಸದಿಗಂತ ವರದಿ,ಮಂಡ್ಯ:

ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷರನ್ನಾಗಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿರುವುದನ್ನು ಸ್ವಾಗತಿಸಿ ಬಿಜೆಪಿ ಕಾರ‌್ಯಕರ್ತರು ನಗರದಲ್ಲಿ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಮಾತನಾಡಿ, ನಮ್ಮ ಮಂಡ್ಯ ಜಿಲ್ಲೆಯ ಮಣ್ಣಿನ ಮಗ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನು ಬಿಜೆಪಿಯ ರಾಜ್ಯಾಧ್ಯಕ್ಷ ಸಾರಥಿಗೆ ಆಯ್ಕೆ ಮಾಡುವ ಮೂಲಕ ಪಕ್ಷದ ವರ್ಚಸ್ಸನ್ನು ಹೆಚ್ಚಲು ಕಾರಣವಾಗಿದೆ, ಜೊತೆಗೆ ಕಾರ್ಯಕರ್ತರಿಗೆ ಬಲ ಬಂದಂತಾಗಿದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆ ರಾಜಕಾರಣಕ್ಕೆ ಹೆಸರಾಗಿದೆ. ಈ ಜಿಲ್ಲೆಯ ಮುತ್ಸದ್ಧಿ ರಾಜಕಾರಣಿಗಳಾದ ಎಸ್.ಎಂ.ಕೃಷ್ಣ, ಕೆ.ವಿ.ಶಂಕರಗೌಡ ಹಾಗೂ ಜಿ.ಮಾದೇಗೌಡರ ಹಾದಿಯಾಗಿ ನಮ್ಮ ಮಂಡ್ಯ ಜಿಲ್ಲೆ ಅಪಾರ ಕೊಡುಗೆ ನೀಡಿದೆ, ಆ ನಿಟ್ಟಿನಲ್ಲಿಯೇ ಇವರನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಶ್ಲಾಘಿಸಿದರು.

ನಾಯಕರಾದ ಬಿ.ವೈ.ವಿಜಯೇಂದ್ರ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತೇವೆ, ಆದರೆ, ಮುಂಬರುವ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಡೆಸುತ್ತಾರೆ ಎಂಬುವ ನಂಬಿಕೆಯಿಂದಲೇ ಹೈಕಮಾಂಡ್ ಈ ಅತ್ಯುನ್ನತ ಹುದ್ದೆ ನೀಡಿದೆ ಎಂದರು.

ರಾಜ್ಯದಲ್ಲಿ ಪಕ್ಷ ಸಂಘಟನೆ ಸೇರಿದಂತೆ ಜನಸಾಮಾನ್ಯರ ಅಭಿವೃದ್ಧಿಗೆ ದುಡಿಯುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಮುನ್ನಡೆಯುತ್ತೇವೆ, ಅದೇರಿತಿ ಮತ್ತೊಬ್ಬ ನಮ್ಮ ಜಿಲ್ಲೆಯ ನಾಯಕರೂ ಆದ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಕೊಟ್ಟರೆ ಪಕ್ಷಕ್ಕೆ ಮತ್ತಷ್ಟು ಬಲ ಹೆಚ್ಚುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ, ಅವರಿಗೆ ವಿರೋಧಪಕ್ಷದ ನಾಯಕತ್ವ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಗರದ ಜೆ.ಸಿ.ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮುಖಂಡರಾದ ಕ್ರಾಂತಿ ಮಂಜು, ಸಿದ್ದರಾಜುಗೌಡ, ಪ್ರಸನ್ನ, ಚಂದ್ರು, ನಾಗಾನಂದ್, ಪುಟ್ಟಮ್ಮ, ಮಹೇಶ್, ಶಿವಲಿಂಗು, ಆನಂದ್ ಭಾಗವಹಿಸಿದ್ದರು.

ಇದೇ ವೇಳೆ ಬಿಜೆಪಿ ಕಾರ‌್ಯಕರ್ತರು ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿ ತಮ್ಮ ಅಭಿಮಾನವನ್ನು ಮೆರೆದರು.

ಹೊಸಹಳ್ಳಿ ಶಿವು, ಶಿವಕುಮಾರ್ ಆರಾಧ್ಯ, ಮಹಂತಪ್ಪ, ನಿತ್ಯಾನಂದ, ಆನಂದ್, ಚಂದ್ರು ಬಿಳಿದೇಗಲು, ಆಲಕೆರೆ ರೇವಣ್ಣ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!