ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ‘ಗೃಹ ಲಕ್ಷ್ಮಿ ಯೋಜನೆ’ಯಡಿ 15,000 ರೂ. ಆರ್ಥಿಕ ನೆರವು ನೀಡುವುದಾಗಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘೋಷಿಸಿದ್ದಾರೆ.
ಈ ಸಂಬಂಧ ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.
‘ದೀಪಾವಳಿಯ ಶುಭ ಸಂದರ್ಭದಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದದೊಂದಿಗೆ ನಾವು ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಮ್ಮ ಸರ್ಕಾರ ಮುಂದಿನ ಐದು ವರ್ಷ ಛತ್ತೀಸ್‌ಗಢವನ್ನು ಸಮೃದ್ಧವಾಗಿಸಲು ಮತ್ತು ಬಡತನ ನಿರ್ಮೂಲನೆ ಮಾಡುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತದೆ. ತಾಯಂದಿರು ಮತ್ತು ಸಹೋದರಿಯರು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಬೇಕೆಂದು ನಾನು ಬಯಸುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.
ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರು ಯಾವುದೇ ಅರ್ಜಿಯನ್ನು ಪೂರ್ಣಗೊಳಿಸುವ ಅಗತ್ಯವಿಲ್ಲ ಮತ್ತು ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದು ಸಿಎಂ ಹೇಳಿದರು. ಸರ್ಕಾರವೇ ಮನೆ ಮನೆಗೆ ಬಂದು ಸಮೀಕ್ಷೆ ನಡೆಸಲಿದ್ದು, ಎಲ್ಲವನ್ನೂ ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಿ ನೇರವಾಗಿ ಖಾತೆಗಳಿಗೆ ಹಣ ಜಮಾ ಮಾಡಲಾಗುವುದು ಎಂದು ಬಾಘೇಲ್ ಸ್ಪಷ್ಟಪಡಿಸಿದರು.
ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನ.7 ರಂದು ನಡೆಯಲಿದ್ದು, ಎರಡನೇ ಹಂತದ ಮತದಾನ ನ.17 ರಂದು ನಡೆಯಲಿದೆ. ಫಲಿತಾಂಶ ಡಿ.3 ರಂದು ಪ್ರಕಟವಾಗಲಿದೆ.