ಹೊಸದಿಗಂತ ವರದಿ ಚಿತ್ರದುರ್ಗ:
ಭರಮಸಾಗರ ಏತ ನೀರಾವರಿ ಯೋಜನೆ ಅನುಷ್ಠಾನದ ಸಂಗತಿಯನ್ನು ಯಾರೂ ರಾಜಕೀಯಗೊಳಿಸಬಾರದು. ಎಲ್ಲ ಪಕ್ಷಗಳು, ಎಲ್ಲರ ಶ್ರಮ ಇದರ ಹಿಂದೆ ಇದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಏತ ನೀರಾವರಿ ಯೋಜನೆಗಾಗಿ ಕೆರೆಗಳ ವೀಕ್ಷಣೆ ಮಾಡಲು ಮುದ್ದಾಪುರ, ಯಳಗೋಡು ಕೆರೆಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮುದ್ದಾಪುರದಲ್ಲಿ ನಡೆದ ಅಚ್ಚುಕಟ್ಟುದಾರರ ಸಭೆಯಲ್ಲಿ ಮಾತನಾಡಿದ ಅವರು, ಭರಮಣ್ಣನಾಯಕ ಕೆರೆ ಕಟ್ಟಿಸದಿದ್ದರೆ ನಾವು ನೀರು ತರಲು ಸಾಧ್ಯವಾಗುತ್ತಿರಲಿಲ್ಲ. ಆ ಪುಣ್ಯಾತ್ಮ ಸಾವಿರ ಎಕರೆಯಲ್ಲಿ ಕೆರೆ ಕಟ್ಟಿಸಿದ. ಕೆರೆ ಕಟ್ಟಿ 300 ವರ್ಷಗಳ ನಂತರ 2021 ಸೆಪ್ಪಂಬರ್‌ನಲ್ಲಿ ಏತ ನೀರಾವರಿ ಯೋಜನೆ ನೀರು ಬಂತು ಎಂದರು.
ಭರಮಸಾಗರ ಯೋಜನೆ ಹೆಸರು ಬದಲಾವಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶ್ರೀಗಳು, ಭರಮಣ್ಣನಾಯಕ ಹೆಸರಲ್ಲಿ ಯೋಜನೆ ಮುಂದುವರಿಯಲಿ. ಹೆಸರಿಗಿಂತ ಅದರ ಹಿಂದಿನ ಆಶಯ ಮುಖ್ಯ. ಅಕ್ಕಿ, ಅಕ್ಷರ ಯಾರು ಕಂಡು ಹಿಡಿದರು. ದಿನ ಅನ್ನ ತಿಂತೀರಾ. ಭತ್ತದಲ್ಲಿ ಅಕ್ಕಿ ಇದೆ ಎಂದು ಯಾರಿಗೆ ತಾನೇ ಗೊತ್ತಿತ್ತು. ಇದನ್ನು ತಿಳಿಸಿದವರು ಯಾರು ಎಂದು ಶ್ರೀಗಳು ಪ್ರಶ್ನಿಸಿದರು.
2008 ರಲ್ಲಿ ಜಗಳೂರಿನಲ್ಲಿ ತರಳುಬಾಳು ಹುಣ್ಣಿಮೆ ಆದಾಗ ಏತ ನೀರಾವರಿ ಯೋಜನೆ ಪ್ರಸ್ತಾಪ ಮಾಡಿದೆವು. 1200 ಕೋಟಿ ರುಪಾಯಿ ಮೊತ್ತದ ಕರಡು ಯೋಜನೆ ರೂಪಿಸಿದ್ದೆವು. ಯೋಜನೆ ಮಂಜೂರು ಆಗಿದೆ ಎಂದು ಸಚಿವರು, ಶಾಸಕರು ಹೇಳುತ್ತಲೇ ಬಂದರು. ನಾವು ಅಂದಿನ ಸಚಿವ ಶಾಮನೂರು ಮಲ್ಲಿಕಾರ್ಜುನಗೆ ಬೆನ್ನು ಹತ್ತಿ ಬಜೆಟ್‌ನಲ್ಲಿ ಸೇರಿಸಿದೆವು. ದಾಖಲೆ ತರಿಸಿಕೊಂಡು ಖಾತರಿ ಮಾಡಿಕೊಂಡೆವು ಎಂದರು.
ಯೋಜನೆ ಅನುಷ್ಟಾನದ ವಿಚಾರದಲ್ಲಿ ಸರ್ಕಾರದ ನಿಬಂಧನೆ ಜಾಸ್ತಿ. ಅದರದ್ದೇ ಆದ ವ್ಯವಸ್ಥೆ ಇದೆ. ಯೋಜನೆ ಒಪ್ಪಿಗೆಗೆ ಸಮಿತಿ ಮುಂದೆ ಹೋಯ್ತು. ಅಲ್ಲಿ ಡಿ.ಕೆ.ಶಿವಕುಮಾರ್, ವೀರಪ್ಪ ಮೊಯ್ಲಿ ಇದ್ದರು. ಸಿರಿಗೆರೆ ಶ್ರೀಗಳ ಕೆಲಸ ಮೊದಲು ಮಾಡಿ ಎಂದು ವೀರಪ್ಪ ಮೊಯ್ಲಿ ಡಿ.ಕೆ.ಶಿವಕುಮಾರ್ ಗೆ ಸಲಹೆ ಮಾಡಿದರು. ಪರಿಣಾಮ 1200 ಕೋಟಿ ರುಪಾಯಿ ವೆಚ್ಚದ ಯೋಜನೆ ಮುಂಜೂರಾಯಿತು ಎಂದು ಹೇಳಿದರು.
ಇದೇ ವೇಳೆಗೆ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಬಂದಿದ್ದರಿಂದ ನಾವು ಗೋಕಾಕ್ ಪ್ರವಾಸದಲ್ಲಿದ್ದೆವು. ಯಡಿಯೂರಪ್ಪ ಅವರು 1200 ಕೋಟಿ ರುಪಾಯಿ ವೆಚ್ಚದ ಯೋಜನೆಯ 250 ಕೋಟಿ ರುಪಾಯಿಗೆ ಸೀಮಿತಗೊಳಿಸಿ ಮಂಜೂರಾತಿ ನೀಡಿದ್ದರು. ಈ ವಿಷಯ ತಿಳಿದ ತಕ್ಷಣ ಅಲ್ಲಿಂದಲೇ ದೂರವಾಣಿಯಲ್ಲಿ ಸಚಿವರುಗಳಾದ ಮಾಧುಸ್ವಾಮಿ, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ, ಸಿ.ಸಿ.ಪಾಟೀಲ್ ಅವರನ್ನು ಸಂಪರ್ಕಿಸಿದೆವು. ಕೋಟಿ ರಪಾಯಿ ಯೋಜನೆಗೆ ನಾವು ಒಪ್ಪಲ್ಲ, 1250 ಕೋಟಿ ಮೊತ್ತದ ಯೋಜನೆಗೆ ಒಂದೇ ಕಂತಲ್ಲಿ ಮಂಜೂರಾತಿ ಬೇಕು ಎಂದು ಕೇಳಿದೆವು. ಒಂದೇ ವಾರದಲ್ಲಿ ಯಡಿಯೂರಪ್ಪ ಅವರು 250 ಕೋಟಿ ರೂ. ಆದೇಶ ಹಿಂಪಡೆದು, 1250 ಕೋಟಿ ಆದೇಶ ಹೊರಡಿಸಿದರು ಎಂದು ಶ್ರೀಗಳು ಹಳೆಯದನ್ನು ನೆನಪು ಮಾಡಿಕೊಂಡರು.
ಭರಮಸಾಗರ ಏತ ನೀರಾವರಿ ಅನುಷ್ಠಾನದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಮೂವರ ಪಾತ್ರ ಇದೆ. ಎಲ್ಲ ಪಕ್ಷದವರು ನೀರು ಕೊಟ್ಟಿದ್ದಾರೆ. ಮುದ್ದಾಪುರ ಕೆರೆಯಲ್ಲಿ ಧುಮುಕು ನೀರು ನೋಡಿ ನಮಗೆ ಸ್ನಾನ ಮಾಡಬೇಕು ಅನ್ನಿಸಿತು. ಅದೊಂದು ರೀತಿ ಶವರ್ ಬಾತ್ ನೋಡಿದಂಗೆ ಆಯ್ತು. ನೀರಿನ ವಿಚಾರವನ್ನು ರಾಜಕೀಯಕ್ಕೆ ಯಾರೂ ಬಳಕೆ ಮಾಡಿಕೊಳ್ಳಬಾರದು. ನಿಮಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದವರು ಕಾಣಿಸಬಹುದು. ಆದರೆ ನಮಗೆ ಎಲ್ಲರೂ ಒಂದೇ ಎಂದು ತರಳಬಾಳು ಶ್ರೀ ಹೇಳಿದರು.
ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಚೌಲಿಹಳ್ಳಿ ಶಶಿಪಾಟೀಲ್, ಕೆರೆ ಪ್ರವಾಸ ಉಸ್ತುವಾರಿ ಜಿ.ಬಿ.ತೀರ್ಥಪ್ಪ, ರೈತ ಸಂಘದ ಮುದ್ದಾಪುರ ನಾಗರಾಜ್, ಹಿರೇಕಬ್ಬಿಗೆರೆ ನಾಗರಾಜ್, ಬಿ.ಇ.ಮಂಜುನಾಥ್, ಬೇಡರ ಶಿವನಕೆರೆ ಶಿವಮೂರ್ತಿ ಹಾಜರಿದ್ದರು. ಚಿಕ್ಕಪ್ಪನಹಳ್ಳಿ ಷಣ್ಮುಖ ಪ್ರಾಸ್ತಾವಿಕ ಮಾತುಗಳನ್ನಾಡಿದರು.