ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾರದ ಬೆಲೆ ಏರಿಕೆಯ ಬೆನ್ನಲ್ಲೇ ಈಗ ಬೆಳ್ಳಿಯ ದರವೂ ಗಗನಕ್ಕೇರಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಸಾರ್ವಕಾಲಿಕ ದಾಖಲೆ ಬರೆದಿದೆ. ಒಂದು ಕೆಜಿ ಬೆಳ್ಳಿಯ ಬೆಲೆ ಬರೋಬ್ಬರಿ 2.5 ಲಕ್ಷ ರೂಪಾಯಿ ತಲುಪುವ ಮೂಲಕ ಹಳೆಯ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಿದೆ.
ಹೊಸ ವರ್ಷದ ಸಂಭ್ರಮದಲ್ಲಿರುವ ಜನತೆಗೆ ಈ ಬೆಲೆ ಏರಿಕೆ ದೊಡ್ಡ ಶಾಕ್ ನೀಡಿದೆ. ಐಟಿ ಸಿಟಿ ಬೆಂಗಳೂರಿನಲ್ಲಿ ಇಂದು ಒಂದು ಕೆಜಿ ಬೆಳ್ಳಿಯ ಬೆಲೆ 2,50,200 ರೂ. ತಲುಪಿದೆ. ಸಂಕ್ರಾಂತಿ ಹಬ್ಬದ ವೇಳೆಗೆ ಈ ಮಟ್ಟದ ಏರಿಕೆಯಾಗಬಹುದು ಎಂದು ತಜ್ಞರು ಅಂದಾಜಿಸಿದ್ದರು, ಆದರೆ ನಿರೀಕ್ಷೆಗಿಂತ ಮುಂಚಿತವಾಗಿಯೇ ಬೆಲೆ ಏರಿಕೆ ಕಂಡುಬಂದಿದೆ.
ಕೇವಲ ಬೆಂಗಳೂರು ಮಾತ್ರವಲ್ಲದೆ ದೆಹಲಿ, ಮುಂಬೈ, ಜೈಪುರ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿಯೂ ಬೆಳ್ಳಿ ದರ ಕೆಜಿಗೆ 2.40 ಲಕ್ಷದಿಂದ 2.50 ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಚಿನ್ನ ಮತ್ತು ಬೆಳ್ಳಿಯ ಈ ನಾಗಾಲೋಟಕ್ಕೆ ಸದ್ಯಕ್ಕೆ ಬ್ರೇಕ್ ಬೀಳುವ ಲಕ್ಷಣಗಳಿಲ್ಲ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

