ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರ್ಜೆಂಟೀನಾದಲ್ಲಿ ಏರ್ ಶೋ ನಡೆಯುತ್ತಿದ್ದ ವೇಳೆ ಫೈಟರ್ ಜೆಟ್ (Fighter Jet) ಪತನಗೊಂಡು ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಸಾವಿಗೀಡಾಗಿದ್ದಾರೆ.
ಸ್ಪಾನಿಷ್ ಮಾಧ್ಯಮಗಳ ವರದಿ ಪ್ರಕಾರ, ಅರ್ಜೆಂಟೀನಾದ ಸಾಂಟಾ ಫೆ ಪ್ರಾಂತ್ಯದ ವಿಲ್ಲಾ ಕೆನಾಸ್‌ನಲ್ಲಿ ನಡೆಯುತ್ತಿದ್ದ ಏರ್‌ಶೋದಲ್ಲಿ ಈ ದುರಂತ ನಡೆದಿದೆ. ದುರಂತಕ್ಕೂ ಮೊದಲು ಈ ಸೇನಾ ತರಬೇತಿ ಜೆಟ್ ಏರ್ ಶೋ ಭಾಗವಾಗಿ ಬಾನಂಗಳದಲ್ಲಿ ವೈಮಾನಿಕ ಸಾಹಸ ಪ್ರದರ್ಶನ ನೀಡುತ್ತಿತ್ತು.
ಈ ದುರಂತರದಲ್ಲಿ ಈ ಫೈಟರ್ ಜೆಟ್‌ನ್ನು ನಿರ್ವಹಿಸುತ್ತಿದ್ದ ಪೈಲಟ್‌ಗಳಾದ ಗ್ಯಾಸ್ಟನ್ ವನೂಸಿ ಮತ್ತು ನಿಕೋಲಸ್ ಸ್ಕೇರ್ಸ್ ಸಾವಿಗೀಡಾಗಿದ್ದಾರೆ.
ದುರಂತಕ್ಕೂ ಮೊದಲು ಈ ವಿಮಾನ ನಡೆಸಿದ ವೈಮಾನಿಕ ಪ್ರದರ್ಶನ ನೋಡುಗರ ಮೈ ರೋಮಾಂಚನಗೊಳಿಸಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಈ ವಿಮಾನ ನೆಲಕ್ಕೆ ಬಿದ್ದು ಬೆಂಕಿಗಾಹುತಿಯಾಗಿದೆ. ಜನರಿದ್ದ ರಸ್ತೆಯಿಂದ ಕೇವಲ ಮೀಟರ್ ದೂರದಲ್ಲಿರುವ ಹೊಲಕ್ಕೆ ಅಪ್ಪಳಿಸಿದ ವಿಮಾನ ನಂತರ ಬೆಂಕಿಗೆ ಆಹುತಿಯಾಗಿದೆ.
ವರದಿಗಳ ಪ್ರಕಾರ, ವಿಮಾನವು ಸೋವಿಯತ್ ಕಾಲದ L29 ಡಾಲ್ಫಿನ್ ಮಿಲಿಟರಿ ತರಬೇತಿ ಜೆಟ್ ಆಗಿತ್ತು. ಸಾರ್ವಜನಿಕರು ಏರ್ ಶೋ ವೀಕ್ಷಿಸುತ್ತಿದ್ದ ಸ್ಥಳದಿಂದ ಕೆಲವು ಮೀಟರ್‌ಗಳ ದೂರದಲ್ಲಿ ಈ ವಿಮಾನ ಅಪಘಾತಕ್ಕೀಡಾಗಿದೆ ಎಂದು ವಿಲ್ಲಾ ಕ್ಯಾನಸ್ ಅಗ್ನಿಶಾಮಕ ಮುಖ್ಯಸ್ಥ ಹೊರಾಸಿಯೊ ಪೆರೇರಾ ಅವರು ಹೇಳಿದ್ದಾರೆ.