ಹೊಸದಿಗಂತ ವರದಿ, ಹಾವೇರಿ:
ಬಿ.ವೈ ವಿಜಯೇಂದ್ರ ಬಿಜೆಪಿ ಯುವ ಘಟಕದ ಅಧ್ಯಕ್ಷನಾಗಿದ್ದರೆ ಚೆನ್ನಾಗಿತ್ತು, ಆದರೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ, ಇದರಿಂದ ಕಾಂಗ್ರೆಸ್ ಗೆ ಬಲ ಬರಲಿದೆ ಬಿಜೆಪಿ 33ಕ್ಕೆ ಕುಸಿಯಲಿದೆ ಎಂದು ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ಲೇವಡಿ ಮಾಡಿದರು.
ಹಾವೇರಿಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಕಾಂಗ್ರೆಸ್ ಯುವ ಘಟಕದ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಹಾವೇರಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮ ರಾಜ್ಯಾಧ್ಯಕ್ಷರು ಡಿಕೆ ಶಿವಕುಮಾರ ಇದ್ದಾರೆ. ಡಿ.ಕೆ.ಶಿ ಬಂದಮೇಲೆ ಬಿಜೆಪಿ 113 ರಿಂದ 66 ಇಳಿದಿದೆ. ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಬಂದ ಮೇಲೆ ಮುಂದೆ ಬಿಜೆಪಿ ನಂಬರ್ 33ಕ್ಕೆ ಕುಸಿಯಲಿದೆ ಎಂದರು.
ಸಿಎಂ ಹುದ್ದು ಕುರಿತು ಪ್ರತಿಕ್ರಿಯಿಸಿದ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಖರ್ಗೆಯವರು ಯಾರನ್ನು ಸಿಎಂ ಮಾಡ್ತಾರೋ ಅವರೇ ಆಗ್ತಾರೆ. ಇದರಲ್ಲಿ ನನ್ನ ಆಗ್ರಹ, ನನ್ನ ಇಷ್ಟ ಅಂತ ಇಲ್ಲಿ ಬರಲ್ಲ. ಇಲ್ಲಿ ಬರೋದು ಪಕ್ಷದ ಹೈಕಮಾಂಡ್ ನಿರ್ಧಾರ ಮಾತ್ರ. ಹೈಕಮಾಂಡ್ ನಿರ್ಧಾರ ನಾನು ಫಾಲೋ ಮಾಡ್ತೀನಿ ಎಂದರು.
ಸಿದ್ದರಾಮಯ್ಯ ೫ ವರ್ಷ ಸಿಎಂ ಆಗಿ ಮುಂದುವರೆದರೆ ನಿಮಗೆ ಒಕೆನಾ ಅಂದಿದ್ದಕ್ಕೆ ಮುಂದಿನ ದಿನಗಳಲ್ಲಿ ಎಲ್ಲಾ ಒಳ್ಳೆದಾಗಲಿದೆ ಎನ್ನುವ ಮೂಲಕ ನಲಪಾಡ್ ಉತ್ತರ ನೀಡದೆ ಜಾರಿಕೊಂಡರು.