ಹೊಸದಿಗಂತ ಡಿಜಿಟಲ್ ಡೆಸ್ಕ್:
2025ನೇ ಸಾಲಿನ ಕೊನೆಯ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ದೇಶದ ಯುವಶಕ್ತಿಯನ್ನು ಶ್ಲಾಘಿಸಿದ ಅವರು, ಭಾರತೀಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅತ್ಯಂತ ಗಂಭೀರವಾದ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಇತ್ತೀಚಿನ ಐಸಿಎಂಆರ್ ವರದಿಯನ್ನು ಉಲ್ಲೇಖಿಸಿದ ಪ್ರಧಾನಿ, ಸಾಮಾನ್ಯ ಕಾಯಿಲೆಗಳಾದ ನ್ಯುಮೋನಿಯಾ ಮತ್ತು ಮೂತ್ರನಾಳದ ಸೋಂಕಿಗೆ ನೀಡಲಾಗುವ ಆ್ಯಂಟಿಬಯೋಟಿಕ್ ಮಾತ್ರೆಗಳು ಈಗ ಅಷ್ಟಾಗಿ ಕೆಲಸ ಮಾಡುತ್ತಿಲ್ಲ ಎಂಬ ಆತಂಕಕಾರಿ ವಿಷಯವನ್ನು ಹಂಚಿಕೊಂಡರು. “ವೈದ್ಯರ ಸಲಹೆಯಿಲ್ಲದೆ ಇಷ್ಟ ಬಂದಂತೆ ಆ್ಯಂಟಿಬಯೋಟಿಕ್ ಸೇವಿಸುವುದು ನಿಮ್ಮ ದೇಹದ ಪ್ರತಿರೋಧ ಶಕ್ತಿಯನ್ನು ಕುಂದಿಸುತ್ತದೆ. ಇದು ರೋಗಗಳ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸುತ್ತದೆ,” ಎಂದು ಅವರು ಕಿವಿಮಾತು ಹೇಳಿದರು.
ಭಾರತದ ಯುವಜನತೆಯೇ ದೇಶದ ದೊಡ್ಡ ಶಕ್ತಿ ಎಂದ ಮೋದಿ, ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ‘ವಿಕಸಿತ ಭಾರತ ಯುವ ನಾಯಕರ ಸಂವಾದ’ದ ಎರಡನೇ ಆವೃತ್ತಿ ನಡೆಯಲಿದೆ ಎಂದು ಘೋಷಿಸಿದರು. ಇದು ಯುವಕರಿಗೆ ದೇಶದ ಭವಿಷ್ಯ ರೂಪಿಸಲು ಸಿಗಲಿರುವ ದೊಡ್ಡ ಅವಕಾಶ ಎಂದು ಅವರು ಬಣ್ಣಿಸಿದರು.
“ಇದು ಈ ವರ್ಷದ ಕಡೆಯ ಮನ್ ಕೀ ಬಾತ್. 2026ರಲ್ಲಿ ನಾವು ಮತ್ತೆ ಹೊಸ ಉತ್ಸಾಹ, ಹೊಸ ವಿಷಯಗಳೊಂದಿಗೆ ಭೇಟಿಯಾಗೋಣ,” ಎಂದು ಹೇಳುವ ಮೂಲಕ ಮೋದಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಚಳಿಗಾಲದ ಈ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಅವರು ಮನವಿ ಮಾಡಿದರು.

