Sunday, December 28, 2025

ಇತಿಹಾಸ ನಿರ್ಮಿಸಿದ ಸ್ಮೃತಿ ಮಂಧಾನ: ಭಾರತದ ಪರ ಈ ಸಾಧನೆ ಮಾಡಿದ 2ನೇ ಮಹಿಳಾ ಕ್ರಿಕೆಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುವನಂತಪುರದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಭಾರತದ ಸ್ಟಾರ್ ಓಪನರ್ ಸ್ಮೃತಿ ಮಂಧಾನ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದ ಸ್ಮೃತಿ, ಈ ಪಂದ್ಯದಲ್ಲಿ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಶಫಾಲಿ ವರ್ಮಾ ಅವರೊಂದಿಗೆ ಸೇರಿ ತಂಡಕ್ಕೆ ಸ್ಫೋಟಕ ಆರಂಭ ನೀಡಿದ ಸ್ಮೃತಿ, ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಲು ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.

ಈ ಪಂದ್ಯದಲ್ಲಿ 27 ರನ್ ಪೂರೈಸುತ್ತಿದ್ದಂತೆಯೇ ಸ್ಮೃತಿ ಮಂಧಾನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಐತಿಹಾಸಿಕ ಸಾಧನೆ ಮಾಡಿದರು. ಈ ಮೈಲಿಗಲ್ಲು ತಲುಪಿದ ಭಾರತದ ಕೇವಲ ಎರಡನೇ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಮಾತ್ರ ಈ ಸಾಧನೆ ಮಾಡಿದ್ದರು.

ಸ್ಮೃತಿ ಮಂಧಾನ ಅವರ ವೃತ್ತಿಜೀವನದ ರನ್ ವಿವರ ಹೀಗಿದೆ:

ಟೆಸ್ಟ್ ಕ್ರಿಕೆಟ್: 7 ಪಂದ್ಯಗಳು – 629 ರನ್

ಏಕದಿನ ಕ್ರಿಕೆಟ್: 117 ಪಂದ್ಯಗಳು – 5,322 ರನ್

ಟಿ20 ಕ್ರಿಕೆಟ್: 4,000ಕ್ಕೂ ಅಧಿಕ ರನ್

ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸದ್ಯ ಮಿಥಾಲಿ ರಾಜ್ (10,868 ರನ್) ಹೆಸರಿನಲ್ಲಿದೆ. ಇದೀಗ 10,000ದ ಗಡಿ ದಾಟಿದ ವೇಗವನ್ನು ನೋಡಿದರೆ, ಸ್ಮೃತಿ ಮಂಧಾನ ಅವರು ಇನ್ನು ಕೆಲವೇ ಪಂದ್ಯಗಳಲ್ಲಿ ಮಿಥಾಲಿ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದು ಭಾರತದ ನಂ.1 ಮಹಿಳಾ ಬ್ಯಾಟರ್ ಆಗಿ ಹೊರಹೊಮ್ಮುವುದು ಖಚಿತವಾಗಿದೆ.

error: Content is protected !!