ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ಜೋರಾಗಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಆಯಾ ಪಕ್ಷಗಳ ಪ್ರಮುಖ ನಾಯಕರು ದಿನಕ್ಕೆ ಎರಡು, ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳಲ್ಲದೆ ರಾಷ್ಟ್ರೀಯ ಪಕ್ಷಗಳೂ ತೆಲಂಗಾಣ ಚುನಾವಣೆಯತ್ತ ತಮ್ಮ ಚಿತ್ತ ಹರಿಸಿವೆ.
ಇತ್ತೀಚೆಗಷ್ಟೇ ಎರಡು ದಿನ ರಾಹುಲ್ ಪ್ರಚಾರ ನಡೆಸಿದರೆ, ಇಂದು ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಬರಲಿದ್ದಾರೆ. ಖಾನಾಪುರ ಮತ್ತು ಆಸಿಫಾಬಾದ್ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 9.40ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಟು ಮಧ್ಯಾಹ್ನ 12 ಗಂಟೆಗೆ ನಾಂದೇಡ್‌ನಿಂದ ಹೆಲಿಕಾಪ್ಟರ್ ಮೂಲಕ ಖಾನಾಪುರ ತಲುಪಲಿದ್ದಾರೆ. ಬಳಿಕ ಮಧ್ಯಾಹ್ನ 1ರವರೆಗೆ ಖಾನಾಪುರ ಸಭೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 1.30ರಿಂದ 2.30ರವರೆಗೆ ಆಸಿಫಾಬಾದ್ ಸಭೆಯಲ್ಲಿ ಭಾಗವಹಿಸುವರು. ಸಭೆಯ ನಂತರ ಪ್ರಿಯಾಂಕಾ ಮತ್ತೆ ನಾಂದೇಡ್ ಮೂಲಕ ದೆಹಲಿಗೆ ತೆರಳಲಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಹೇಗಾದರೂ ಗೆಲ್ಲುತ್ತೇವೆ ಎಂಬ ವಿಶ್ವಾಸ ಕಾಂಗ್ರೆಸ್ ವಲಯದಲ್ಲಿದೆ. ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣಾ ಮತದಾನ ನಡೆಯಲಿದ್ದು, ನವೆಂಬರ್ 28 ರಂದು ಸಂಜೆ ಚುನಾವಣಾ ಪ್ರಚಾರ ಕೊನೆಗೊಳ್ಳಲಿದೆ.