Sunday, December 28, 2025

ರಿಚಾ ಘೋಷ್ ಅಬ್ಬರ, ಲಂಕಾ ಬೌಲರ್‌ಗಳು ತತ್ತರ: ಟೀಮ್ ಇಂಡಿಯಾಗೆ ದಾಖಲೆಯ ಮೊತ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಅಕ್ಷರಶಃ ಅಬ್ಬರಿಸಿದೆ. ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 221 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದೆ. ಇದು ಅಂತರರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತ ದಾಖಲಿಸಿದ ಅತ್ಯಧಿಕ ಸ್ಕೋರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪಂದ್ಯದ ಆರಂಭದಿಂದಲೇ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಲಂಕಾ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಈ ಇಬ್ಬರು ನೀಡಿದ ಭದ್ರ ಅಡಿಪಾಯದ ಮೇಲೆ ರಿಚಾ ಘೋಷ್ ರನ್ ಸೌಧವನ್ನು ನಿರ್ಮಿಸಿದರು. ಅದರಲ್ಲೂ ಪಂದ್ಯದ ದ್ವಿತೀಯಾರ್ಧದಲ್ಲಿ ಭಾರತದ ಬ್ಯಾಟಿಂಗ್ ವೇಗ ಊಹೆಗೂ ಮೀರಿತ್ತು. ಕೇವಲ ಅಂತಿಮ 10 ಓವರ್‌ಗಳಲ್ಲಿ ಭಾರತ ತಂಡ 136 ರನ್‌ಗಳನ್ನು ಚಚ್ಚುವ ಮೂಲಕ ಲಂಕಾ ಪಡೆಯನ್ನು ದಿಕ್ಕುಗಾಣಿಸಿತು.

ಸ್ಫೋಟಕ ಬ್ಯಾಟರ್ ರಿಚಾ ಘೋಷ್ ಕೇವಲ 16 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 40 ರನ್ ಸಿಡಿಸಿದರು. ಪಂದ್ಯದ 19ನೇ ಓವರ್ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಪ್ರಮುಖವಾಯಿತು. ಆ ಓವರ್‌ನ ಅಂಕಿಅಂಶ ಹೀಗಿದೆ:

3 ಮತ್ತು 4ನೇ ಎಸೆತ: ಸತತ ಎರಡು ಸಿಕ್ಸರ್.

5ನೇ ಎಸೆತ: ಆಕರ್ಷಕ ಬೌಂಡರಿ.

6ನೇ ಎಸೆತ: ಮತ್ತೊಂದು ಮನಮೋಹಕ ಸಿಕ್ಸರ್.

ಒಂದೇ ಓವರ್‌ನಲ್ಲಿ 23 ರನ್ ಬಾಚುವ ಮೂಲಕ ರಿಚಾ ಘೋಷ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ಭಾರತದ ಈ ಹಿಮಾಲಯ ಸದೃಶ ಮೊತ್ತದ ಮುಂದೆ ಶ್ರೀಲಂಕಾ ತಂಡ ಈಗ ಪರ್ವತದಂತಹ ಗುರಿಯನ್ನು ಬೆನ್ನಟ್ಟಬೇಕಿದೆ.

error: Content is protected !!