ಮಹಿಳೆಯರು ಸಿಗುವ ಅವಕಾಶಗಳ ಬಳಸಿಕೊಂಡು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿ: ರತ್ನಪ್ರಭ

ಹೊಸ ದಿಗಂತ ವರದಿ , ಮೈಸೂರು:

ಅವಕಾಶ ಸಿಕ್ಕರೆ ಒಬ್ಬ ಮಹಿಳೆಯು ಯಾವುದೇ ರಾಗ, ದ್ವೇಷ ಹಾಗೂ ಅಸೂಯೆ ಪಡದೆ ಇನ್ನೊಬ್ಬ ಮಹಿಳೆಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು. ಆಗ ಮಾತ್ರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭ ಹೇಳಿದರು.

ಭಾನುವಾರ ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ನಾದಮಂಟಪ ಸಭಾಂಗಣದಲ್ಲಿ ರಾಷ್ಟç ಭಾರತಿ ಚಾರಿಟೇಬಲ್ ಟ್ರಸ್ಟ್ ನ ಮಹಿಳಾ ಸಮನ್ವಯದ ಮೈಸೂರು ವಿಭಾಗದಿಂದ ಆಯೋಜಿಸಲಾಗಿದ್ದ ನಾರೀ ಶಕ್ತಿ ಸಂಗಮ’ ಮಹಿಳಾ ಸಮ್ಮೇಳದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರು ಯಾವಾಗಲೂ ತಮ್ಮ ಮನೆ, ಕುಟುಂಬದ ನಿರ್ವಹಣೆಯ ಚಿಂತೆಯಲ್ಲಿಯೇ ಇರುತ್ತಾರೆ. ದುಡಿಯುವ ಮಹಿಳೆಯರು ಎಷ್ಟು ಬೇಗ ಮನೆಗೆ ಹೋಗುತ್ತೇವೋ ಎಂದು ಆಲೋಚಿಸುತ್ತಿರುತ್ತಾರೆ. ಇದು ಮಹಿಳೆಯರ ಅಭಿವೃದ್ಧಿಗೆ ತೊಡಕಾಗುತ್ತಿದೆ. ವರ್ಷದಲ್ಲಿ ಒಂದು ದಿನವಾದರೂ ಮಹಿಳೆಯರು ಮನೆ, ಕುಟುಂಬದ ಚಿಂತೆಯನ್ನು ಬಿಟ್ಟು ತಮಗಾಗಿ, ತಮ್ಮ ಅಭಿವೃದ್ಧಿಗಾಗಿ ಚಿಂತನೆ ನಡೆಸಿದರೆ, ಅದರಿಂದ ಸಾಕಷ್ಟು ಉಪಯೋಗವಾಗುತ್ತದೆ ಎಂದು ತಿಳಿಸಿದರು.

ಗಂಡು, ಹೆಣ್ಣು ಎಂಬ ಬೇಧಬಾವ ಮನೆಯಲ್ಲಿಯೇ ಸೃಷ್ಠಿಯಾಗುತ್ತದೆ. ಅದು ಕೂಡ ಹೆಣ್ಣಿನಿಂದಲೇ ಎಂಬುದು ಬೇಸರದ ಸಂಗತಿ. ಗಂಡು, ಹೆಣ್ಣು ಎಂಬ ಬೇಧ ಇರಬಾರದು. ಇಂದು ಮಹಿಳೆಯರು ಅನೇಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇನ್ನೂ ಮಾಡುತ್ತಲೇ ಇದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮನೆಯಲ್ಲಿರುವ ಪ್ರತಿಭಾವಂತ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಬೇರೆಯವರ ಸಹಾಯದಿಂದಲೇ ನಮ್ಮ ಅಭಿವೃದ್ಧಿಯಾಗಬೇಕು ಎಂದು ಮಹಿಳೆಯರು ಕಾದು ಕುಳಿತುಕೊಳ್ಳಬಾರದು. ಇಂದು ಅವಕಾಶಗಳು ಸಾಕಷ್ಟಿವೆ. ಅವುಗಳನ್ನು ಬಳಸಿಕೊಂಡು ಸ್ವಪ್ರಯತ್ನದಿಂದಲೇ ನೀವು ಅಭಿವೃದ್ಧಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.

ಸಾಮಾಜಿಕ ಕಾರ್ಯಕರ್ತೆ ಹೆಚ್.ಜಿ.ಶೋಭ, ಅನಾದಿ ಕಾಲದಿಂದಲೂ ಮಹಿಳೆ ಒಂದು ಅದ್ಭುತ ಶಕ್ತಿಯಾಗಿ ಗೋಚರಿಸಿದ್ದಾಳೆ. ನಮ್ಮ ವೇದ-ಪುರಾಣಗಳಲ್ಲಿ ರಾಮಾಣ, ಮಹಾಭಾರತಗಳಲ್ಲಿ ಮಹಿಳೆಯ ಆದರ್ಶ ಮತ್ತು ಮೌಲ್ಯಗಳನ್ನು ತಿಳಿಸಿಕೊಡಲಾಗಿದೆ. ಆದರೆ, ಇಂದು ಅದನ್ನು ಮರೆಮಾಚಲಾಗುತ್ತಿದೆ. ಅದನ್ನು ನೆನಪಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದರು.

ಸಮ್ಮೇಳನವನ್ನು ಅವಧೂತ ಆಶ್ರಮದ ಶ್ರೀಗಣಪತಿ ಸಚ್ಚದಾನಂದಸ್ವಾಮಿ ಉದ್ಘಾಟಿಸಿ, ಆರ್ಶೀವಚನ ನೀಡಿದರು. ಆಶ್ರಮದ ಕಿರಿಯ ಶ್ರೀಗಳಾದ ದತ್ತ ವಿಜಯನಂದ ತೀರ್ಥ ಸ್ವಾಮಿ, ಸಾಹಿತಿ ಮೀರಾ ಫಡ್ಕೇ, ಮಮತ ಕಿಣಿ, ಖ್ಯಾತ ನೃತ್ಯಗಾತಿ ವಸುಂದರ ದೊರೆಸ್ವಾಮಿ ಮತ್ತಿತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!