ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಲ್ಲಿ ತಲೆಯೆತ್ತಿರುವ ವಿಶ್ವದ ಮೊದಲ 3ಡಿ ಮುದ್ರಿತ ದೇವಾಲಯ ಇಂದು ಉದ್ಘಾಟನೆಗೊಂಡಿದೆ. ವಾಸ್ತುಶಿಲ್ಪದ ಸೌಂದರ್ಯ ಮತ್ತು ತಾಂತ್ರಿಕ ಜ್ಞಾನದೊಂದಿಗೆ ಅಸಾಧಾರಣ ರೀತಿಯಲ್ಲಿ ನಿರ್ಮಿಸಲಾದ ಆಧ್ಯಾತ್ಮಿಕ ಅದ್ಭುತವೇ ಸಿದ್ದಿಪೇಟೆಯಲ್ಲಿನ ಶ್ರೀಪಾದ ಕಾರ್ಯ ಸಿದ್ಧೇಶ್ವರ ಸ್ವಾಮಿ ದೇವಸ್ಥಾನ.
ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್ ಸಹಯೋಗದಲ್ಲಿ ಅಪ್ಸುಜಾ ಇನ್ಫ್ರಾಟೆಕ್ ಅವರಿಂದ ಈ ವಿನೂತನ ದೇವಾಲಯವನ್ನು ನಿರ್ಮಿಸಲಾಗಿದ್ದು, ಸಿದ್ದಿಪೇಟೆಯ ಹೃದಯಭಾಗದಲ್ಲಿರುವ ಬೂರುಗಪಲ್ಲಿ ಮತ್ತು ವಾಯಪುರಿ ಎಂದು ಕರೆಯಲ್ಪಡುವ ಈ ದೇವಾಲಯವು ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ.
ಈ ಭವ್ಯವಾದ ರಚನೆಯು 35.5 ಅಡಿ ಎತ್ತರ ಮತ್ತು 4,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದು ಮಾನವನ ಜಾಣ್ಮೆ ಮತ್ತು ಭಕ್ತಿಗೆ ಒಂದು ವಿಸ್ಮಯ-ಸ್ಫೂರ್ತಿದಾಯಕ ಸಾಕ್ಷಿಯಾಗಿದೆ. ಪ್ರತಿಷ್ಠಾಪನೆ ಪೂರ್ಣಗೊಂಡ ನಂತರ ನವೆಂಬರ್ 24 ರಿಂದ ಮೂರ್ತಿಗಳು ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಲಿದೆ.
ಈ ಉದ್ಘಾಟನಾ ಸಮಾರಂಭದಲ್ಲಿ ಅಪ್ಸುಜಾ ಇನ್ಫ್ರಾಟೆಕ್ ವ್ಯವಸ್ಥಾಪಕ ನಿರ್ದೇಶಕ ಹರಿ ಕೃಷ್ಣ ಜೀಡಿಪಲ್ಲಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅಮಿತ್ ಘುಲೆ, ಮತ್ತು ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್ ಮುಖ್ಯ ತಂತ್ರಜ್ಞಾನ ಅಧಿಕಾರಿ ಶ್ರೀ ವಾಸಿಂ ಚೌಧರಿ ಭಾಗವಹಿಸಿದ್ದರು.