ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾತುಕತೆ ನಡೆಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಧಾಮಿ..ʻಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರೆ ಮಾಡಿ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದರು. ಕೇಂದ್ರ ಏಜೆನ್ಸಿಗಳು, ಅಂತರಾಷ್ಟ್ರೀಯ ತಜ್ಞರು ಮತ್ತು ರಾಜ್ಯ ರಕ್ಷಣಾ ತಂಡಗಳೊಂದಿಗೆ ನಡೆಸಲಾಗುತ್ತಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಲಾಯಿತುʼ ಎಂದು ಸಿಎಂ ಧಾಮಿ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ವೈದ್ಯರ ತಂಡ, ಆಂಬ್ಯುಲೆನ್ಸ್ಗಳು, ಹೆಲಿಕಾಪ್ಟರ್ ಸೇವೆ ಮತ್ತು ಕಾರ್ಮಿಕರ ಚಿಕಿತ್ಸೆ ಮತ್ತು ಆರೈಕೆಗಾಗಿ ತಾತ್ಕಾಲಿಕ ಆಸ್ಪತ್ರೆಯ ವ್ಯವಸ್ಥೆ ಮಾಡಿರುವ ಬಗ್ಗೆಯೂ ಪ್ರಧಾನಿಗೆ ತಿಳಿಸಿದರು. ಜೊತೆಗೆ ಕಾರ್ಮಿಕರ ಕುಟುಂಬಗಳ ಪ್ರಸ್ತುತ ಪರಿಸ್ಥಿತಿ, ಅವರೊಂದಿಗೆ ಸರಕಾರಿ ಅಧಿಕಾರಿಗಳ ಒಡನಾಟ ಹಾಗೆಯೇ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಯೋಗಕ್ಷೇಮದ ಬಗ್ಗೆಯೂ ಸಿಎಂ ಧಾಮಿ ಪ್ರಧಾನಿಗೆ ವಿವರಿಸಿದರು.