ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದ ರಜೌರಿಯಲ್ಲಿ ಬುಧವಾರ ಸೇನಾಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧರ ಪೈಕಿ ಮಂಗಳೂರಿನ ಮೂಲದ ಎಂ.ವಿ. ಪ್ರಾಂಜಲ್ ಒಬ್ಬರು.
ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ. ವೆಂಕಟೇಶ್ ಮತ್ತು ಅನುರಾಧ ದಂಪತಿಯ ಏಕೈಕ ಪುತ್ರ 28 ವರ್ಷದ ಕ್ಯಾಪ್ಟನ್ ಎಂ.ವಿ ಪ್ರಾಂಜಲ್.
ಮಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದ ಪ್ರಾಂಜಲ್, ಡಿಪಿಎಸ್ ಎಂಆರ್ಪಿಎಲ್ ಸ್ಕೂಲ್ನಲ್ಲಿ ಎಲ್ಕೆಜಿಯಿಂದ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದು ಬಳಿಕ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು. ಬಳಿಕ ಮಧ್ಯಪ್ರದೇಶದ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಷನ್ನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದು ಸೇನೆಗೆ ಸೇರಿದ್ದರು. ಎರಡು ವರ್ಷಗಳ ಹಿಂದೆಯಷ್ಟೇ ಪ್ರಾಂಜಲ್ ವಿವಾಹವಾಗಿದ್ದರು.
ಬುಧವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರ ನಿಗ್ರಹಕ್ಕಾಗಿ ಸೇನೆ ನಡೆಸಿದ ಎನ್ಕೌಂಟರ್ನಲ್ಲಿ 63 ರಾಷ್ಟ್ರೀಯ ರೈಫಲ್ಸ್ ನ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಸೇರಿ 4 ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಉಗ್ರರಿಗಾಗಿ ಸೇನಾ ಕಾರ್ಯಾಚರಣೆ ಮುಂದುವರೆದಿದೆ.