ಉಡುಪಿಯ ನೇಜಾರಿನ ನಾಲ್ವರ ಕೊಲೆ ಪ್ರಕರಣ: ಪೊಲೀಸರ ಮುಂದೆ ಕಾರಣ ಬಾಯಿಬಿಟ್ಟ ಆರೋಪಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಡುಪಿ ಜಿಲ್ಲೆಯ ನೇಜಾರಿನ ತೃಪ್ತಿನಗರದ ಮನೆಯಲ್ಲಿ ನ.12 ರಂದು ನಡೆದ ನಾಲ್ಕು ಕೊಲೆಯ ಆರೋಪಿ ಪ್ರವೀಣ್ ಅರುಣ್ ಚೌಗಲೆಗೆ ತನ್ನ ಸಹದ್ಯೋಗಿ ಐನಾಝ್ ಮೇಲಿದ್ದ ಅತಿಯಾದ ವ್ಯಾಮೋಹ (possesiveness) ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ವಿವರಿಸಿದ ಅವರು, ಆರೋಪಿ ಪ್ರವೀಣ್ ಅರುಣ್ ಚೌಗಲೆ ಮತ್ತು ಐನಾಝ್ ಕಳೆದ 8 ತಿಂಗಳಿನಿಂದ ಪರಿಚಯಸ್ಥರಾಗಿದ್ದು, ಏರ್ ಇಂಡಿಯಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 8 – 10 ಬಾರಿ ವಿದೇಶಕ್ಕೆ ತೆರಳುವ ವಿಮಾನದಲ್ಲಿ ಒಟ್ಟಿಗೆ ಕರ್ತವ್ಯ ನಿರ್ವಹಿಸುವ ಅವಕಾಶವು ದೊರಕಿತ್ತು. ಹೀಗೆ ಅವರಿಬ್ಬರ ನಡುವೆ ಗೆಳೆತನವು ಬೆಳೆದಿತ್ತು. ಆಕೆಗೆ ಓಡಾಟ ನಡೆಸಲು ಸಹಾಯವಾಗಲೆಂದು ಆರೋಪಿ ತನ್ನ ದ್ವಿಚಕ್ರ ವಾಹನವನ್ನು ಆಕೆಯ ಬಳಕೆಗೆ ನೀಡಿದ್ದನು‌. ಇತ್ತೀಚೆಗೆ ತಿಂಗಳ ಹಿಂದೆ, ಐನಾಝ್ ಆರೋಪಿಯ ಜೊತೆಗಿನ ಒಡನಾಟದಿಂದ ದೂರ ಸರಿದು, ಮಾತನಾಡುತ್ತಿರಲಿಲ್ಲ. ಇದರಿಂದ ಪ್ರವೀಣ್ ತೀವ್ರ ವಿಚಲಿತನಾಗಿ ಸಿಟ್ಟಿಗೆದ್ದಿದ್ದನು. ತನ್ನ ಜೊತೆಗಿನ ಒಡನಾಟದಿಂದ ದೂರ ಸರಿದ ಐನಾಝ್ ಳನ್ನು ಕೊಲೆ ಮಾಡುವ ಉದ್ದೇಶದಿಂದ ಆಕೆಯ ಮನೆಗೆ ಆ್ಯಪ್ ನ ಸಹಾಯದಿಂದ ಆಗಮಿಸಿದ ಆರೋಪಿಯು, ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅದೇ ವೇಳೆ ತಡೆಯಲು ಬಂದ ಆಕೆಯ ತಾಯಿ ಹಸೀನಾ, ಸಹೋದರಿ ಅಫ್ನಾನ್, ಮನೆಯ ಹೊರಗೆ ಆಟವಾಡುತ್ತಿದ್ದ ಅಸೀಮ್ ಮನೆಯ ಒಳಗೆ ಬರುತ್ತಿದ್ದ ವೇಳೆ ಆತನಿಗೂ ಚೂರಿ ಇರಿದಿದ್ದಾನೆ ಎಂದು ತಿಳಿಸಿದರು.

ಮೊದಲೇ ಮಾಡಿದ್ದ ಪ್ಲಾನ್
ನ.12 ರಂದು ಮಂಗಳೂರಿನ ಫ್ಲ್ಯಾಟ್ ನಲ್ಲಿದ್ದ ಆರೋಪಿ ಮುಂಜಾನೆ ತನ್ನ ಕಾರಿನಲ್ಲಿ ಹೆಜಮಾಡಿ ಟೋಲ್ ವರೆಗೆ ಪ್ರಯಾಣಿಸಿ, ಕಾರನ್ನು ನಿಲ್ಲಿಸಿದ್ದರು. ಅಲ್ಲಿಂದ ಬಸ್, ರಿಕ್ಷಾದಲ್ಲಿ ನೇಜಾರಿನ ಮನೆ ತಲುಪಿದ್ದಾನೆ. ಹತ್ಯೆಗೈದ ನಂತರ ದ್ವಿಚಕ್ರ ವಾಹನ, ಬಸ್ ನ ಮೂಲಕ ವಾಪಾಸು ಮೂಲ್ಕಿ ತಲುಪಿದ್ದು, ಹೆಜಮಾಡಿ ಟೋಲ್ ನ ಮಂಗಳೂರು ಭಾಗದಲ್ಲಿ ನಿಲ್ಲಿಸಿದ್ದ ಕಾರನಲ್ಲಿ ಮನೆಗೆ ತಲುಪಿದ್ದಾನೆ. ಮಾರ್ಗ ಮಧ್ಯದಲ್ಲಿ ಕೃತ್ಯಕ್ಕೆ ನಡೆಸುವ ವೇಳೆ ಧರಿಸಿದ್ದ ಅಂಗಿಯನ್ನು ಸುಟ್ಟು ಹಾಕಿದ್ದಾನೆ. ಕೃತ್ಯಕ್ಕೆ ಬಳಸಿದ ಚಾಕು ಆತನ ಫ್ಲ್ಯಾಟ್ ನಲ್ಲಿ ಪತ್ತೆಯಾಗಿದೆ. ಘಟನೆ ನಡೆದ ದಿನ ಮಂಗಳೂರಿನ ಫ್ಲ್ಯಾಟ್ ಗೆ ತೆರಳಿ, ಕೈಯಿಗೆ ಆದ ಗಾಯಕ್ಕೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಂಡಿದ್ದನು. ನಂತರ ತನ್ನ ಕುಟುಂಬಸ್ಥರೊಂದಿಗೆ ಬೆಳಗಾವಿಗೆ ತೆರಳಿದ್ದನು.

ಪ್ರವೀಣ್ 2007 ರಲ್ಲಿ ಪುಣೆ ಸಿಟಿ ಪೊಲೀಸ್ ನಲ್ಲಿ ತರಬೇತಿ ಪಡೆಯುತ್ತಿದ್ದಾಗಲೇ, ಏರ್ ಇಂಡಿಯಾದಲ್ಲಿ ಉತ್ತಮ ಅವಕಾಶ ಸಿಕ್ಕಿತ್ತು‌. ಪೊಲೀಸ್ ನೌಕರಿ ಬಿಟ್ಟು, 2008 ರಲ್ಲಿ ಏರ್ ಇಂಡಿಯಾ ಸೇರ್ಪಡೆಯಾಗಿದ್ದನು‌. ಈತನ ವಿರುದ್ದ ಇರುವರೆಗೆ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ, ಕೊಲೆಗೆ ಐನಾಝ್ ಮೇಲಿನ ಅತಿಯಾದ ಮೋಹವೇ ಕಾರಣ ಎಂದು ಸ್ಪಷ್ಟವಾಗಿದೆ ಎಂದರು.

ಹತ್ಯೆಯಾದವರ ಮೊಬೈಲ್, ಆರೋಪಿಯ ಮೊಬೈಲ್ ಗಳನ್ನು ಎಫ್.ಎಸ್.ಎಲ್ ಗೆ ಕಳುಹಿಸಲಾಗುತ್ತದೆ. ಈಗಾಗಲೇ ಕೃತ್ಯಕ್ಕೆ ಬಳಸಿದ ಎಲ್ಲಾ ವಸ್ತುಗಳು ವಶಕ್ಕೆ ಪಡೆದು ಮಹಜರು ಪ್ರಕ್ರಿಯೆ ನಡೆಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಕುಟುಂಬದ ಯಜಮಾನ ನೂರ್ ಮಹಮ್ಮದ್ ಸೇರಿದಂತೆ ಕುಟುಂಬಸ್ಥರು ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಸಣ್ಣ ವಿಚಾರವನ್ನು ಮುಚ್ಚಿಡದೇ ಪೊಲೀಸರೊಂದಿಗೆ ಎಲ್ಲವನ್ನು ಹೇಳಿಕೊಂಡಿದ್ದರಿಂದಲೇ ಆರೋಪಿಯನ್ನು ಶೀಘ್ರವಾಗಿ ಪತ್ತೆಹಚ್ಚಲು ಸಾಧ್ಯವಾಯಿತು ಎಂದರು.

ಪೊಲೀಸ್ ತಂಡಕ್ಕೆ ಬಹುಮಾನ
ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರಕರಣವನ್ನು ಭೇದಿಸಲು ಜಿಲ್ಲಾ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಕ್ಷಿಪ್ರವಾಗಿ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ಈ ತಂಡಕ್ಕೆ 1.50 ಲಕ್ಷ ರೂ ಬಹುಮಾನ ನೀಡಲು ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದೇನೆ. ಶೀಘ್ರದಲ್ಲಿ ಬಹುಮಾನ ಘೋಷಣೆಯಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!