ರಜೌರಿಯಲ್ಲಿ ಗುಂಡಿನ ಚಕಮಕಿ: ಭದ್ರತಾ ಪಡೆಯಿಂದ ಇಬ್ಬರು ಉಗ್ರರ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಜೌರಿಯಲ್ಲಿ (Rajouri) ಭದ್ರತಾ ಪಡೆಗಳು ಮತ್ತು ಉಗ್ರರ (Terrorists) ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.
ರಾಜೌರಿಯ ಕಲಕೋಟ್ ಅರಣ್ಯದಲ್ಲಿ ನಿನ್ನೆ (ಬುಧವಾರ) ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಜೌರಿ ಪ್ರದೇಶದ ಕಾಲಾಕೋಟ್ ಅರಣ್ಯದಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳ ಕಾರ್ಯಾಚರಣೆ ನಡೆಯುತ್ತಿದೆ. ಈ ಕಾರ್ಯಾಚರಣೆಯಲ್ಲಿ ಮೊದಲಿಗೆ ಓರ್ವ ಉಗ್ರನನ್ನು ಹೊಡೆದುರುಳಿಸಲಾಯ್ತು. ಈತನನ್ನು ಪಾಕಿಸ್ತಾನದ ಪ್ರಜೆ ಖಾರಿ ಎಂದು ಗುರ್ತಿಸಲಾಗಿದೆ. ಈತ ಲಷ್ಕರ್ – ಇ – ತೊಯ್ಬಾ ಉಗ್ರಗಾಮಿ ಸಂಘಟನೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ತೀವ್ರಗೊಳಿಸಲು ಈತನನ್ನು ಪಾಕಿಸ್ತಾನದಿಂದ ರವಾನೆ ಮಾಡಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ. ಈತನನ್ನು ಹತ್ಯೆಗೈದ ಬಳಿಕ ಶೋಧ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳಿಗೆ ಐಇಡಿ ಸ್ಫೋಟಕ ಸಾಮಗ್ರಿಗಳು ಸಿಕ್ಕಿವೆ ಎಂದು ಜಮ್ಮು ವಿಭಾಗದ ರಕ್ಷಣಾ ಇಲಾಖೆ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭದ್ರತಾ ಪಡೆಗಳು ಹತ್ಯೆ ಮಾಡಿರುವ ಉಗ್ರ ಖಾರಿ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ದೇಶಗಳಲ್ಲಿ ತರಬೇತಿ ಪಡೆದಿದ್ದ. ಲಷ್ಕರ್ – ಇ – ತೊಯ್ಬಾ ಉಗ್ರ ಸಂಘಟನೆಯಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಅನುಭವ ಈತನಿಗೆ ಇತ್ತು. ಕಳೆದ ಒಂದು ವರ್ಷಗಳ ಹಿಂದೆ ಈತ ಭಾರತದ ಒಳಗೆ ನುಸುಳಿದ್ದ. ಜಮ್ಮು ಮತ್ತು ಕಾಶ್ಮೀರದ ರಜೌರಿ – ಪುಂಚ್ ಭಾಗಗಳಲ್ಲಿ ಈತ ಸಕ್ರಿಯನಾಗಿದ್ದ. ಕಣಿವೆ ರಾಜ್ಯದ ದಂಗ್ರಿ ಹಾಗೂ ಕಂದ್ರಿಯಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಈತನೇ ಮಾಸ್ಟರ್ ಮೈಂಡ್ ಎಂದು ತಿಳಿದು ಬಂದಿದೆ.

ಉಗ್ರ ಖಾರಿಯ ಜೊತೆಗೆ ಇದ್ದ ಮತ್ತೊಬ್ಬ ಭಯೋತ್ಪಾದಕನನ್ನೂ ಭದ್ರತಾ ಪಡೆಗಳು ಹತ್ಯೆಗೈದಿವೆ. ಈತನಿಂದಲೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈತನ ಕುರಿತಾಗಿ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರ ಬೀಳಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!