ಹೊಸದಿಗಂತ ವರದಿ ಹಾವೇರಿ:
ಪೊಲೀಸ್ ಠಾಣೆಯಿಂದ ಕಾರು ಬಿಡಿಸಿಕೊಳ್ಳಲು ಹೋದವರಿಗೆ ಪೊಲೀಸ್ ಸಿಬ್ಬಂದಿ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸ್ ಕಾನ್‌ಸ್ಟೆಬಲ್ ಲಂಚಕ್ಕೆ ದುಂಬಾಲು ಬಿದ್ದ ವಿಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಲ್ಲದೆ ಪೊಲೀಸರ ಕಾರ್ಯವೈಖರಿ ಬಗ್ಗೆ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಶಿಗ್ಗಾಂವಿ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ರಮೇಶ ಭಜಂತ್ರಿ ಲಂಚ ಕೇಳಿದವರು. ಪೊಲೀಸ್ ಠಾಣೆ ಗೇಟ್ ಎದುರು ಸಾಲು ಸಂತೆ ನಡೆಯುತ್ತದೆ. ಈ ವೇಳೆ ಅಲ್ಲಿ ಕಾರು ಮಾಲೀಕನಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ಚಿತ್ರೀಕರಣ ಆಗಿದೆ ಎನ್ನಲಾಗಿದೆ.
15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿ ಬಂದಿದ್ದು, ಸುಮಾರು 8.47 ನಿಮಿಷಗಳ ವಿಡಿಯೋದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಸ್ಪಷ್ಟವಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಾನ್‌ಸ್ಟೇಬಲ್ ರಮೇಶ ಅವರನ್ನು ಈಗ ಎಸ್ಪಿ ಅಮಾನತು ಮಾಡಿ ಆದೇಶಿಸಿದ್ದಾರೆ.
ಈ ಘಟನೆಯ ಕುರಿತಾಗಿ ಎಸ್ಪಿ ಅನ್ಶುಕುಮಾರ್ ಮಾಹಿತಿ ನೀಡಿದ್ದು, ಕಾನ್‌ಸ್ಟೇಬಲ್ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ದೃಶ್ಯಾವಳಿ ನನ್ನ ಗಮನಕ್ಕೆ ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇಲಾಖೆಯು ವಿಚಾರಣೆ ಕಾಯ್ದಿರಿಸಿ, ಕಾನ್‌ಸ್ಟೇಬಲ್ ರಮೇಶ ಭಜಂತ್ರಿಯನ್ನು ಅಮಾನತು ಮಾಡಲಾಗಿದೆ. ವಿಚಾರಣೆ ಬಳಿಕ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.