ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಾತಿ ಗಣತಿ ವರದಿ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿರುವ ಹೊತ್ತಿನಲ್ಲೇ ರಾಜ್ಯ ಸರ್ಕಾರ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರಾವಧಿಯನ್ನು 2 ತಿಂಗಳು ವಿಸ್ತರಿಸಿದೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ಅವಧಿ ಎರಡು ತಿಂಗಳು ವಿಸ್ತರಣೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಮೂಲಗಳ ಪ್ರಕಾರ ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರಾವಧಿಯನ್ನು 2024 ರ ಜನವರಿ 31 ರವರೆಗೆ ವಿಸ್ತರಿಸಲಾಗಿದೆ. ಅವರ ಅವಧಿ ಇಂದಿಗೆ ಮುಕ್ತಾಯಗೊಳ್ಳಲಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಈ ಹಿಂದೆಯೇ ಸಿಎಂ ಸಿದ್ದರಾಮಯ್ಯ ಈ ಸಂಬಂಧ ಮೌಖಿಕವಾಗಿ ಮುಂದುವರಿಯುಂತೆ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ಸೂಚಿಸಿದ್ದಾರೆ.
ಆದರೆ, ಈ ಸಂಬಂಧ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿರಲಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ಮಹತ್ವದ ನಿರ್ಣಯ ಕೈಗೊಂಡಿದೆ. ಈ ಮೂಲಕ ಡಿಸೆಂಬರ್ ಒಳಗೆ ಜಾತಿ ಗಣತಿ ವರದಿಯನ್ನು ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಸರ್ಕಾರ ಚಿಂತನೆ ನಡೆಸಿದೆ.
The tenure of Jayaprakash Hegde, Karnataka Backward Classes Commission Chairman extended till 31st of January 2024. His term was to expire today.
— ANI (@ANI) November 24, 2023
ಸಿಎಂಗೆ ಪತ್ರ ಬರೆದಿದ್ದ ಹೆಗ್ಡೆ
ಈ ಸಂಬಂಧ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ನವೆಂಬರ್ 22ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ಅವಧಿಯು 2023ರ ನವೆಂಬರ್ 26ರಂದು ಮುಕ್ತಾಯಗೊಳ್ಳಲಿದೆ. ಪ್ರಸ್ತುತ ಆಯೋಗವು 2015ರ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ತಯಾರಿಸುವ ಪ್ರಕ್ರಿಯೆಯಲ್ಲಿದೆ. ಈ ವರದಿಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ಸಲ್ಲಿಸಲು ಕಾಲಾವಕಾಶ ಬೇಕಿದ್ದು, ಪ್ರಸ್ತುತ ಆಯೋಗವನ್ನು ಮುಂದುವರಿಸಬೇಕು ಎಂದು ಕೋರಿದ್ದರು ಎಂದು ಹೇಳಲಾಗಿದೆ.
ಈ ಡಿಸೆಂಬರ್ ಒಳಗೆ ವರದಿಯನ್ನು ಸಲ್ಲಿಕೆ ಮಾಡುತ್ತೇವೆ
ವರದಿ ಮಿಸ್ ಆಗಿಲ್ಲ. ನನ್ನ ಅವಧಿ ಈ ತಿಂಗಳು ಮುಕ್ತಾಯ ಆಗುತ್ತಿತ್ತು. ಆದರೆ, ಸರ್ಕಾರದವರು ನನಗೆ ಈಗ ಅವಧಿಯನ್ನು ಮುಂದುವರಿಸಿದ್ದಾರೆ. ನಮಗೆ ಸಮಯ ಕೊಟ್ಟಿರುವುದರಿಂದ ಪುನಃ ಮರುಪರಿಶೀಲನೆ ಮಾಡಿ ಆರಂಭದಲ್ಲಿ ಮಾಡಲು ಆಗುತ್ತದೆ. ಆದಷ್ಟು ಬೇಗ ವರದಿ ಕೊಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರೇ ಸಮಯ ಕೊಟ್ಟ ಮೇಲೆ ನಮಗೆ ಸುಲಭ ಆಯಿತು ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದರು.