ಕೊರಿಯರ್ ಸ್ಕ್ಯಾಮ್ ಅಂದ್ರೆ ಗೊತ್ತಾ? ನೀವು ಬಲಿಪಶು ಆಗೋದಕ್ಕೆ ಮುನ್ನ ಇದನ್ನು ಓದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಹೊಸ ಹಗರಣವೊಂದು ಆರಂಭವಾಗಿದ್ದು, ಸದ್ದಿಲ್ಲದೇ ಜನರು ಕೋಟಿ ಕೋಟಿ ರುಪಾಯಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದುವೇ ಕೊರಿಯರ್ ಸ್ಕ್ಯಾಮ್! ನೀವು ಈ ಸ್ಕ್ಯಾಮರ‍್ಸ್ ಕೈಗೆ ಸಿಕ್ಕಿಹಾಕಿಕೊಳ್ಳಬಾರದೆಂದರೆ ಇದನ್ನು ಓದಿ..

ಏನಿದು ಕೊರಿಯರ್ ಸ್ಕ್ಯಾಮ್?

ಸ್ಕ್ಯಾಮರ‍್ಸ್ ನಿಮಗೆ ದೂರವಾಣಿ ಕರೆ ಮಾಡಿ ತಾವು ಕಸ್ಟಮ್ಸ್ ಅಧಿಕಾರಿಗಳು ಎಂದು ಹೇಳಿಕೊಳ್ಳುತ್ತಾರೆ. ನಿಮ್ಮ ಹೆಸರು ಮತ್ತು ವಿಳಾಸಗಳನ್ನು ಹೇಳುತ್ತಾರೆ. “ಹೌದು, ಅದು ನಾನೇ” ಎಂದು ನೀವು ಖಾತ್ರಿಪಡಿಸುತ್ತಿದ್ದಂತೆ, ನಿಮ್ಮ ವಿಳಾಸಕ್ಕೆ ಪಾರ್ಸೆಲ್ ಬಂದಿರುವುದಾಗಿಯೂ ಹಾಗೂ ಅದರಲ್ಲಿ ನಿಷೇಧಿತ ವಸ್ತುಗಳು, ಮಾದಕ ದ್ರವ್ಯಗಳು ಇರುವುದಾಗಿ ತಿಳಿಸುತ್ತಾರೆ. ಇದನ್ನು ಕೇಳುತ್ತಲೇ ಹೆಚ್ಚಿನವರು ಗೊಂದಲ ಮತ್ತು ಭಯಕ್ಕೆ ಬೀಳುತ್ತಾರೆ. ಸುಂಕದ ಅಧಿಕಾರಿಗಳ ಸೋಗಿನಲ್ಲಿರುವ ಹಗರಣಕಾರರು ತಕ್ಷಣವೇ ನಿಮ್ಮ ಭಯ ಹೆಚ್ಚಿಸುತ್ತ “ನಿಮ್ಮ ಬಂಧನಕ್ಕೆ ಪೊಲೀಸರನ್ನು ಕಳಿಸುತ್ತೇವೆ” ಎನ್ನುತ್ತಾರೆ. ಆಗ ಸಹಜವಾಗಿಯೇ ನೀವು “ಏನಾದರೂ ಮಾಡಿ…ನನ್ನದೇನೂ ತಪ್ಪಿಲ್ಲ” ಎಂಬ ಭಯ-ಆತಂಕಗಳ ಮಾತಾಡುತ್ತೀರಿ. ಆಗ ಅತ್ತಲಿನಿಂದ ಪೊಲೀಸರ ಜತೆ “ಸೆಟ್ಲಮೆಂಟ್” ಮಾಡಿಕೊಂಡುಬಿಡಿ ಎಂದು ಹೇಳುತ್ತ, ನೀವು ಯಾವ ಖಾತೆಗೆ ಹಣ ಹಾಕಬೇಕು ಎಂಬ ವಿವರ ಕೊಡುತ್ತಾರೆ.

ಈ ಹಂತದಲ್ಲಿ ಕೆಲವರಿಗೆ ಕೇವಲ ದೂರವಾಣಿ ಮಾತುಗಳ ಮೇಲೆ ನಂಬಿಕೆ ಬರದಿದ್ದಾಗ, ಈ ಹಗರಣಕೋರರೇ ಸ್ಕೈಪ್ ಅಥವಾ ಇನ್ಯಾವುದೇ ವಿಡಿಯೊ ಕಾನ್ಫರೆನ್ಸ್ ಮಾಧ್ಯಮದ ಮುಖಾಂತರ ಯಾವುದೋ ಮಹಾನಗರದ ಸೈಬರ್ ಠಾಣೆ ಎಂದು ಬಿಂಬಿಸುವ ಕಡೆ ನಿಮ್ಮನ್ನು ಸಂಪರ್ಕಿಸುತ್ತಾರೆ. ಅಲ್ಲಿ ಕಾಣಿಸುವ ವ್ಯಕ್ತಿ ಪಕ್ಕಾ ಪೊಲೀಸ್ ಧಿರಿಸು ಮತ್ತು ಗತ್ತುಗಳೊಂದಿಗೆ ಮಾತನಾಡುತ್ತಾನೆ. ಈ ಹಂತದಲ್ಲಿ ಹೆಚ್ಚಿನವರು ಹೇಗಾದರೂ ಇದರಿಂದ ಹೊರಬರೋಣ, ಕಾನೂನಿನ ಗೋಜಲುಗಳು ಬೇಡ ಎಂಬ ಮನಸ್ಥಿತಿಯಲ್ಲಿ ಹಣ ನೀಡುವುದಕ್ಕೆ ಒಪ್ಪುತ್ತಾರೆ.

ಮತ್ತೊಂದು ಟೆಕ್ನಿಕ್
ಇವರ ಮತ್ತೊಂದು ಟೆಕ್ನಿಕ್ ಎಂದರೆ ಮಿಸ್ ಕಾಲ್. ಹೌದು, ಮಿಸ್ ಕಾಲ್ ಆಗಿದೆ ಎಂದು ಮತ್ತೆ ನೀವು ಕರೆ ಮಾಡಿದಾಗ ಫೆಡೆಕ್ಸ್ ಅಥವಾ ಬ್ಲೂಡಾರ್ಟ್ ಕೊರಿಯರ್ ಕಂಪನಿಯ ಸ್ವಯಂಚಾಲಿತ ಧ್ವನಿ ಸಹಾಯವಾಣಿ ನಿಮಗೆ ಕೇಳುತ್ತದೆ. ಕೆಲ ಸೆಕೆಂಡ್‌ಗಳ ನಂತರ ಸ್ಕ್ಯಾಮರ‍್ಸ್ ಮಾತನಾಡುತ್ತಾರೆ, ಪೊಲೀಸ್ ಹತ್ತಿರವೂ ಮಾತನಾಡಿಸಿ ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಾರೆ.

ಈ ಒಟ್ಟಾರೆ ಪ್ರಕ್ರಿಯೆಗಳಲ್ಲಿ, ವ್ಯಕ್ತಿ ಎಷ್ಟರಮಟ್ಟಿಗೆ ಹೆದರಿದ್ದಾನೆ ಎಂಬ ಆಧಾರದಲ್ಲಿ ಸ್ಕ್ಯಾಮರುಗಳ ಕಾರ್ಯಾಚರಣೆ ತೆರೆದುಕೊಳ್ಳುತ್ತದೆ. ಕೆಲವು ಪ್ರಕರಣಗಳಲ್ಲಿ ಕೇವಲ ನಿರ್ದಿಷ್ಟ ಮೊತ್ತದ ಹಣಕ್ಕೆ ಸೀಮಿತವಾಗಿರದೇ ವ್ಯಕ್ತಿಯ ಆಧಾರ್ ಖಾತೆ, ಬ್ಯಾಂಕ್ ದಾಖಲೆಗಳನ್ನೆಲ್ಲ ಪಡೆದುಕೊಂಡು ಅವರ ಎಲ್ಲ ಉಳಿತಾಯಗಳನ್ನು ದೋಚಿರುವುದರ ಉದಾಹರಣೆಗಳೂ ಇವೆ.

1.52 ಕೋಟಿ ರೂ ಪಂಗನಾಮ!

ವ್ಯಕ್ತಿಯೊಬ್ಬರಿಂದ ಬರೋಬ್ಬರಿ 1.52 ಕೋಟಿ ರುಪಾಯಿಗಳನ್ನು ಹಗರಣಕಾರರು ವಸೂಲು ಮಾಡಿಕೊಂಡಿರುವ ಪ್ರಕರಣಗಳೂ ವರದಿಯಾಗಿವೆ. ಮಾಧ್ಯಮ ವರದಿಯೊಂದರ ಪ್ರಕಾರ, ಈ ವರ್ಷ ಕನಿಷ್ಟ 250 ಪ್ರಕರಣಗಳು ಬೆಂಗಳೂರಿನಲ್ಲೇ ಆಗಿವೆ.

ರಕ್ಷಿಸಿಕೊಳ್ಳೋದು ಹೇಗೆ?

ಗೊತ್ತಿಲ್ಲದವರ ಕರೆಗಳಿಗೆ ಹೆಚ್ಚು ಸ್ಪಂದಿಸಬೇಡಿ. ಸರ್ಕಾರಿ ಅಧಿಕಾರಿಗಳು ಎಂದು ಹೇಳಿದರೂ ಬ್ಯಾಂಕ್ ಅಥವಾ ಅಧಿಕೃತ ಇಲಾಖೆಗಳ ಟೋಲ್ ಫ್ರೀ ಸಂಖ್ಯೆಗೆ ಮತ್ತೆ ಕರೆ ಮಾಡಿ ಖಚಿತಪಡಿಸಿಕೊಳ್ಳಿ.

ಕರೆ ಮಾಡಿದವರು ಕೇಳಿದ ಒಟಿಪಿ ಯಾವ ಕಾರಣಕ್ಕೂ ಕೊಡಬೇಡಿ. ಇಷ್ಟೇ ಅಲ್ಲ ನಿಮ್ಮ ಆಧಾರ್ ಅಥವಾ ಇನ್ಯಾವುದೇ ದಾಖಲೆ ನೀಡಬೇಡಿ.

ವಾಟ್ಸಾಪ್ ಅಥವಾ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಪರಿಚಿತರು ಕಳಿಸಿದ ಲಿಂಕ್‌ಗಳನ್ನು ಒತ್ತಬೇಡಿ.

ಸಂಖ್ಯೆ ಅನುಮಾನಾಸ್ಪದವಾಗಿ ಕಂಡುಬಂದರೆ ಕರೆ ಸ್ವೀಕರಿಸಬೇಡಿ. ಅನುಮಾನ ಬಂದಲ್ಲಿ ಸೈಬರ್ ಕ್ರೈಮ್ ಇಲಾಖೆಗೆ ವರದಿ ನೀಡಿ.

ನಿಮ್ಮ ಮನಸ್ಥಿತಿ, ಮನೋಸ್ಥೈರ್ಯಗಳನ್ನು ನೋಡಿಕೊಂಡು ಇವರು ಮಾತನಾಡುತ್ತಾರೆ., ಕಾನೂನಿನ ಪದಗಳನ್ನು ಬಳಸಿ ಮಾತನಾಡಿದರೂ ಭಯಪಡಬೇಡಿ, ಧೈರ್ಯದಿಂದ ಮಾತನಾಡಿ. ಸ್ಕ್ಯಾಮರ‍್ಸ್ ಎಂದು ಗೊತ್ತಾದ ತಕ್ಷಣವೇ ಪೊಲೀಸರಿಗೆ ದೂರು ನೀಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!