Monday, December 29, 2025

ಮತದಾರರ ಪಟ್ಟಿ ಪರಿಷ್ಕರಣೆ: ಉತ್ತರಪ್ರದೇಶದಲ್ಲಿ 2.8 ಕೋಟಿ, ಅಸ್ಸಾಂನಲ್ಲಿ 10.56 ಲಕ್ಷ ಹೆಸರಿಗೆ ಕೊಕ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:


ಉತ್ತರಪ್ರದೇಶದಲ್ಲಿ ಡಿಸೆಂಬರ್ 26 ರಂದು ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಪೂರ್ಣಗೊಂಡಿದ್ದು, ಕರಡು ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಮೊದಲ ಹಂತದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬರೋಬ್ಬರಿ 2.8 ಕೋಟಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.

ಉತ್ತರ ಪ್ರದೇಶದ ಕರಡು ಮತದಾರರ ಪಟ್ಟಿ ಡಿಸೆಂಬರ್ 31ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಸುಮಾರು 12.55 ಕೋಟಿ ಮತದಾರರ ಹೆಸರುಗಳಿದ್ದು ಒಟ್ಟು 2.89 ಕೋಟಿ ಹೆಸರುಗಳನ್ನು ಹಿಂದಿನ ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವ ಹೆಸರನ್ನು ಮತ್ತೆ ಸೇರಿಸಲು ಜನವರಿ 1ರಿಂದ ಅವಕಾಶ ನೀಡಲಾಗುತ್ತದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಮತದಾರರ ಕರಡು ಪಟ್ಟಿಯಲ್ಲಿರುವ 12,55,56,000 ಮತದಾರರಲ್ಲಿ 1 ಕೋಟಿಗೂ ಹೆಚ್ಚು ಮತದಾರರು ಇನ್ನೂ ಗುರುತಿಸಲ್ಪಟ್ಟಿಲ್ಲ. ಇವರಿಗೆ ದೃಢೀಕರಿಸಿದ ದಾಖಲೆಗಳನ್ನು ಒದಗಿಸುವಂತೆ ನೊಟೀಸ್ ನೀಡಲಾಗುವುದು ಎಂದು ಮುಖ್ಯ ಚುನಾವಣಾ ಅಧಿಕಾರಿ (CEO) ನವದೀಪ್ ರಿನ್ವಾ ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಸುಮಾರು 52 ದಿನಗಳ ಕಾಲ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯು ನವೆಂಬರ್ 4 ರಂದು ಆರಂಭವಾಗಿ ಎರಡು ಬಾರಿ ಅವಧಿ ವಿಸ್ತರಣೆ ಮಾಡಿದ ಬಳಿಕ ಡಿಸೆಂಬರ್ 26ರಂದು ಪೂರ್ಣಗೊಳಿಸಲಾಗಿದೆ.

ಹಿಂದಿನ ಮತದಾರರ ಪಟ್ಟಿಯಲ್ಲಿ ಒಟ್ಟು 15,44,00,000 ಮತದಾರರಿದ್ದು, ಇದರಲ್ಲಿ ಶೇ. 18.70ರಷ್ಟು ಅಂದರೆ 2,88,75,000 ಮಂದಿಯ ಹೆಸರನ್ನು ಸಾವು, ನಿವಾಸ ಬದಲಾವಣೆ ಅಥವಾ ಬೇರೆಡೆ ಮತದಾರರಾಗಿ ದಾಖಲಾಗಿರುವ ಕಾರಣಕ್ಕಾಗಿ ಅಳಿಸಿ ಹಾಕಲಾಗಿದೆ. ಲಕ್ನೋ, ಗಾಜಿಯಾಬಾದ್, ಪ್ರಯಾಗ್‌ರಾಜ್ ಮತ್ತು ಕಾನ್ಪುರ ಸೇರಿದಂತೆ ದೊಡ್ಡ ನಗರ ಕೇಂದ್ರಗಳಲ್ಲೇ ಹೆಚ್ಚಿನ ಮತದಾರರ ಹೆಸರನ್ನು ಅಳಿಸಿ ಹಾಕಲಾಗಿದೆ ಎಂದು ಅವರು ಹೇಳಿದರು.

ಮತದಾರರ ಪಟ್ಟಿಗೆ ಮತ್ತೆ ಹೆಸರು ಸೇರಿಸಲು 2003 ರ ಎಸ್ಐಆರ್ ಪಟ್ಟಿಯಲ್ಲಿ ಸೇರ್ಪಡೆ ಅಥವಾ ಇಸಿಐ ಸೂಚಿಸಿದ ಯಾವುದೇ ದಾಖಲೆಗಳನ್ನು ಪುರಾವೆಯಾಗಿ ಒದಗಿಸಬೇಕಾಗುತ್ತದೆ. ಜನವರಿ 1 ಮತ್ತು 31ರ ವರೆಗೆ ಇದಕ್ಕೆ ಅವಕಾಶವಿದೆ. ಕರಡು ಮತದಾರರ ಪಟ್ಟಿಯಲ್ಲಿರುವ ಸುಮಾರು 12.55 ಕೋಟಿ ಹೆಸರುಗಳ ಕುರಿತು ಚುನಾವಣಾ ಆಯೋಗವು ಆಕ್ಷೇಪಣೆಗಳನ್ನು ಕೂಡ ಸಲ್ಲಿಸಬಹುದು ಎಂದು ತಿಳಿಸಿದೆ. ಆಕ್ಷೇಪಣೆಗಳನ್ನು ಸಲ್ಲಿಸಲು ಫಾರ್ಮ್ 7 ಅನ್ನು ಭರ್ತಿ ಮಾಡುವಂತೆ ಅವರು ತಿಳಿಸಿದರು.

ಇನ್ನು ಅಗತ್ಯ ದಾಖಲೆಗಳನ್ನು ಸಲ್ಲಿಸಲು ವಿಫಲರಾದರೆ ಅವರ ಹೆಸರನ್ನು ಕೂಡ ಅಂತಿಮ ಪಟ್ಟಿಯಿಂದ ಹೊರಗಿಡಲಾಗುವುದು. ಕರಡು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಶೇ. 91 ಕ್ಕೂ ಹೆಚ್ಚು ಮತದಾರರನ್ನು ಗುರುತಿಸಲಾಗಿದೆ. ಉಳಿದ 1 ಕೋಟಿಗೂ ಹೆಚ್ಚು ಮತದಾರರಿಗೆ ಸಂಬಂಧಿತ ದಾಖಲೆಗಳನ್ನು ಒದಗಿಸುವಂತೆ ಚುನಾವಣಾ ಅಧಿಕಾರಿಗಳು ನೊಟೀಸ್ ಕಳುಹಿಸಲಿದ್ದಾರೆ. ಇದು 2026ರ ಫೆಬ್ರವರಿವರೆಗೆ ನಡೆಯಲಿದೆ ಎಂದರು.

ಅಸ್ಸಾಂನಲ್ಲಿ 10.56 ಲಕ್ಷಕ್ಕೂ ಹೆಚ್ಚು ಹೆಸರು
ಅಸ್ಸಾಂನಲ್ಲೂ ಮತದಾರರ ಪಟ್ಟಿಯ ತೀವ್ರ ವಿಶೇಷ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಹೊಸ ಕರಡು ಮತದಾರರ ಪತಿಯಿಂದ 10.56 ಲಕ್ಷಕ್ಕೂ ಹೆಚ್ಚು ಹೆಸರನ್ನು ಕೈಬಿಡಲಾಗಿದೆ.

ಮಾಹಿತಿ ಪ್ರಕಾರ ಮತದಾರರ ಮರಣ ಕಾರಣಕ್ಕಾಗಿಯೇ ಬರೋಬ್ಬರಿ 4,78,992 ಹೆಸರುಗಳನ್ನು ತೆಗೆದುಹಾಕಲಾಗಿದೆ. ಇನ್ನು 5,23,680 ಮತದಾರರು ತಮ್ಮ ನೋಂದಾಯಿತ ವಿಳಾಸಗಳಲ್ಲಿ ಇಲ್ಲದೇ ಇರುವ ಕಾರಣ ಅವರ ಹೆಸರನ್ನು ತೆಗೆದುಹಾಕಲಾಗಿದೆ. ಒಂದೇ ರೀತಿಯ ಹೆಸರು, ವಯಸ್ಸು ಅಥವಾ ಛಾಯಾಚಿತ್ರಗಳ ಕಾರಣಕ್ಕಾಗಿ 53,619 ಹೆಸರುಗಳನ್ನು ತಿದ್ದುಪಡಿಗೆ ಗುರುತಿಸಲಾಗಿದೆ.

ಮುಂಬರುವ ಚುನಾವಣೆಗಳಿಗೆ ಮುನ್ನವೇ ಅಸ್ಸಾಂನಲ್ಲಿ ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ ಕಾರ್ಯವನ್ನು ಶನಿವಾರ ಮುಗಿಸಿ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅನುರಾಗ್ ಗೋಯಲ್, ಜನತಾ ಪ್ರಾತಿನಿಧ್ಯ ಕಾಯ್ದೆ 1950 ರ ಪ್ರಕಾರ ಡಿಸೆಂಬರ್ 27 ರಂದು ಪ್ರಾರಂಭವಾದ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಔಪಚಾರಿಕ ಅರ್ಜಿಗಳನ್ನು ಸ್ವೀಕರಿಸಿದ ಬಳಿಕವೇ ಹೆಸರುಗಳ ಅಳಿಸುವಿಕೆ ಅಥವಾ ಬದಲಾವಣೆ ಕಾರ್ಯವನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕರಡು ಪಟ್ಟಿಯ ಮಾಹಿತಿ ಪ್ರಕಾರ ಪ್ರಸ್ತುತ ಅಸ್ಸಾಂನಲ್ಲಿ 2,51,09,754 ಮತದಾರರಿದ್ದು, 93,021 ಮಂದಿಯನ್ನು ಸಂಶಯಾಸ್ಪದ ಮತದಾರರು ಎಂದು ಗುರುತಿಸಲಾಗಿದೆ.

ಕರಡು ಮತದಾರರ ಪಟ್ಟಿಯಲ್ಲಿ ಮತದಾರರ ಸಂಖ್ಯೆಯಲ್ಲಿ ಶೇ. 1.35ರಷ್ಟು ಹೆಚ್ಚಳವಾಗಿದ್ದು, ಒಟ್ಟು ಮತದಾರರ ಸಂಖ್ಯೆ 2,52,01,624 ರಷ್ಟಿದೆ. ರಾಜ್ಯಾದ್ಯಂತ ನವೆಂಬರ್ 22 ರಿಂದ ಡಿಸೆಂಬರ್ 20 ರವರೆಗೆ ನಡೆದ ಮತದಾರರ ಪಟ್ಟಿ ತೀವ್ರ ಪರಿಷ್ಕರಣಾ ಕಾರ್ಯದಲ್ಲಿ 35 ಜಿಲ್ಲಾ ಚುನಾವಣಾ ಅಧಿಕಾರಿಗಳು, 126 ಚುನಾವಣಾ ನೋಂದಣಿ ಅಧಿಕಾರಿಗಳು, 1,260 ಸಹಾಯಕ ಇಆರ್‌ಒಗಳು, 29,656 ಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮತ್ತು 2,578 ಬಿಎಲ್‌ಒ ಮೇಲ್ವಿಚಾರಕರು ಭಾಗವಹಿಸಿದ್ದರು. ರಾಜಕೀಯ ಪಕ್ಷಗಳು ಕೂಡ ಇದಕ್ಕೆ 61,533 ಬೂತ್ ಮಟ್ಟದ ಏಜೆಂಟ್‌ಗಳನ್ನು (ಬಿಎಲ್‌ಎಗಳು) ನಿಯೋಜಿಸುವ ಮೂಲಕ ಸಹಕಾರ ನೀಡಿತ್ತು ಎಂದು ಅವರು ತಿಳಿಸಿದರು.

ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಜನವರಿ 22 ರವರೆಗೆ ಅವಕಾಶ ನೀಡಲಾಗಿದೆ. ಮೃತ ಮತದಾರರ ಹೆಸರುಗಳನ್ನು ತೆಗೆದುಹಾಕಲು ನಮೂನೆ 7 ಮತ್ತು ವಿಳಾಸ ಬದಲಾವಣೆಗಳನ್ನು ನವೀಕರಿಸಲು ನಮೂನೆ 8 ರಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಇವೆಲ್ಲವುಗಳ ಪರಿಶೀಲನೆ ಬಳಿಕ ಫೆಬ್ರವರಿ 10 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

error: Content is protected !!