ಹೊಸದಿಗಂತ ವರದಿ ತುಮಕೂರು:
ಡಿ. 10ರೊಳಗೆ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಲಿಂಬಾವಳಿ, ಅರವಿಂದ ಬೆಲ್ಲದ, ರಮೇಶ್ ಜಾರಕಿಹೊಳಿ ಸೇರಿ ಐದಾರು ಜನ ನಾಯಕರು ದೆಹಲಿಗೆ ಹೋಗಿ ಹೈ ಕಮಾಂಡ್ ಗೆ ನಮ್ಮ ನೋವು ಹೇಳಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.
ಸಿದ್ದಗಂಗಾ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿ
ಶ್ರೀ ಸಿದ್ದಲಿಂಗ ಸ್ವಾಮೀಜಿ ಆರ್ಶೀವಾದ ಪಡೆದು ಮಾತನಾಡುತ್ತಿದ್ದರು. ಹೈಕಮಾಂಡ್‌ಗೆ ನಮ್ಮ ನೋವು ಹೇಳುತ್ತೇವೆ. ನಾವು ಹಿರಿಯರು ನಮ್ಮದೇ ಆದ ಅನುಭವ, ಸೇವೆ ಇದೆ, ಆಲೋಚನೆ ಇದೆ. ಇದನ್ನೆಲ್ಲ ಹೈ ಕಮಾಂಡ್ ಮುಂದೆ ಹೇಳುತ್ತೇವೆ. ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡುವುದು ಇಲ್ಲದೇ ಇದ್ದರೆ ಏನೂ ಆಗಿಲ್ಲ ಅಂತಾ ಸುಮ್ಮನಿರ್ತಾಳೆ. ಎಲ್ಲವೂ ನನ್ನದೇ ಅನ್ನೋದು ಸರಿಯಲ್ಲ. ಹಾಗಾಗಿ ನಮ್ಮ ನೋವನ್ನು ಹೈ ಕಮಾಂಡ್‌ಗೆ ತಿಳಿಸುತ್ತೇವೆ ಎಂದರು.
ಡಿ. 6 ರಂದು ನಡೆಯಲಿರುವ ಗುರುಭವನ ಲೋಕಾರ್ಪಣೆ ಸಮಾರಂಭ ಪರಿಶೀಲನೆ ನಡೆಸಲು ಬಂದಿದ್ದೇನೆ. ನಾನು ಶ್ರೀ ಮಠದ ಒಬ್ಬ ಭಕ್ತ. ನನಗೂ ದೊಡ್ಡ ಗುರುಗಳಿಗೂ ಅವಿನಾಭಾವ ಸಂಬಂಧವಿತ್ತು ಮಠದ ಜತೆಗಿನ 44 ವರ್ಷಗಳ ಸಂಬಂಧ ನನ್ನದು. ಶ್ರೀ ಮಠದಲ್ಲಿ ಆಶೀರ್ವಾದ ಪಡೆದು ಬೆಳೆದವನು. ನಮ್ಮ ಕುಟುಂಬ ನನಗೆ ಮಾಹಿತಿ ಗೊತ್ತಿಲ್ಲದೇ ಗುರುಭವನ ನಿರ್ಮಿಸಿದೆ. ನಾನು ಈ ಗುರುಭವನವನ್ನು ನೋಡುತ್ತಿರುವುದು ಇದು ಮೊದಲನೇ ಸಲ. ಯಾವುದೇ ಕಾರ್ಯಕ್ರಮ ಮಾಡುವಾಗ. ಆ ಭಾಗದ ಜನಪ್ರತಿನಿಧಿಗಳನ್ನು ಕರೆಯುವುದು ಸಂಪ್ರದಾಯ. ಅದೇ ರೀತಿ ನಾನು ಯಾವುದೇ ಕಾರ್ಯಕ್ರಮ ಮಾಡಿದ್ದರೂ ಅದಕ್ಕೆ ಅನುಗುಣವಾಗಿ ಆಹ್ವಾನ ಮಾಡಿಕೊಂಡು ಬಂದಿದ್ದೇನೆ ಎಂದರು.
ಕಾರ್ಯಕ್ರಮಕ್ಕೆ ಸಹಕಾರಿ ಸಚಿವ ಕೆ.ಎನ್. ರಾಜಣ್ಣ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಬರುತ್ತಾರೆ. ಸಂಸದರು, ಇಬ್ಬರು ಶಾಸಕರು, ಇಬ್ಬರು ಎಂಎಲ್‌ಸಿ ಇದ್ದಾರೆ. ಅವರಿಗೆಲ್ಲಾ ಆಹ್ವಾನ ಮಾಡಿದ್ದೇನೆ. ಇದರಲ್ಲಿ ರಾಜಕೀಯ ಮಾಡೋವಷ್ಟು ಕೀಳು ಮಟ್ಟದವನು ನಾನಲ್ಲ. ಎಲ್ಲರಿಗೂ ಸಮಾನತೆ ಕೊಟ್ಟಿರುವ ಮಠ ಇದು. ಈ ಕಾರ್ಯಕ್ರಮಕ್ಕೆ ರಾಜಕೀಯ ಲೇಪನ ಬೇಡ ಎಂದರು.
ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿಗಳ ದರ್ಶನ ಪಡೆದರು. ಈ ವೇಳೆ ಪತ್ನಿ ಶೈಲಜಾ ಸೋಮಣ್ಣ ಹಾಗೂ ಪುತ್ರ ಅರುಣ್ ಸೋಮಣ್ಣ ಜತೆಗಿದ್ದರು.
ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜ್ಯೋತಿಗಣೇಶ್, ಅರುಣ್ ಸೋಮಣ್ಣ, ಶೈಲಜಾ ಸೋಮಣ್ಣ, , ಸಿ.ಎಂ. ರಾಜಪ್ಪ, ದಾಸೇಗೌಡ, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಶ್ರೀಧರ್, ಪಾಲನೇತ್ರ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಬಾವಿಕಟ್ಟೆ ನಾಗಣ್ಣ, ಶಿವಪ್ರಸಾದ್, ಸಿದ್ಧಗಂಗಾ ಆಸ್ಪತ್ರೆಯ ಡಾ. ಪರಮೇಶ್ವರ್, ಆರ್. ಬಸವರಾಜು, ಗ್ಯಾಸ್ ಬಾಬು, ಪ್ರಕಾಶ್ ಅ ಮತ್ತಿತರರು ಉಪಸ್ಥಿತರಿದ್ದರು.