ಹೊಸದಿಗಂತ ವರದಿ ಹುಬ್ಬಳ್ಳಿ:
ಪ್ರತಿ ನಿತ್ಯ ಕಾಲೇಜು ವಿದ್ಯಾರ್ಥಿಗಳಿಂದ ತುಂಬಿ ಕಂಗೊಳಿಸುತ್ತಿದ್ದ ಬಿವಿಬಿ ಕಾಲೇಜ್ ಆವರಣ ಭಾನುವಾರ ಶಾಲಾ ವಿದ್ಯಾರ್ಥಿಗಳಿಂದ ಕೂಡಿತ್ತು. ವಿದ್ಯಾರ್ಥಿಗಳು ಕೈಯಲ್ಲಿ ಬಣ್ಣ ಬಣ್ಣ ಸ್ಕೇಚ್, ಪೆನ್ಸಿಲ್, ಡ್ರಾಯಿಂಗ್ ಶೀಟ್ ಹಿಡಿದು ಚಿತ್ರ ಬಿಡಿಸಲು ನಾಮುಂದು ತಾಮುಂದೆ ಅನ್ನುತ್ತಿದ್ದು, ಒಬ್ಬರ ಮುಖ ಒಬ್ಬರು ನೋಡಿ ಚಿತ್ರ ಬಿಡಿಸಲು ಪ್ರಾರಂಭಿಸಿದರು. ಈ ದೃಶ್ಯಗಳು ವಿದ್ಯಾನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕಂಡುಬಂದಿತು.
ಹಿರಿಯ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯ ವೇಳೆ ಮಕ್ಕಳ ಚಿತ್ತಾರದ ಕಲರವ ಕೇಳಿಬಂದಿದೆ. ಹಾಳೆ ಹಾಗೂ ಬಣ್ಣದ ಪೆನ್ಸಿಲ್‌ಗಳನ್ನು ಆಯೋಜಕರ ಕಡೆಯಿಂದ ನೀಡಲಾಗಿತ್ತು. ಕೆಲವರು ಜಲ ವರ್ಣ, ಸ್ಕೆಚ್‌ಪೆನ್‌ಗಳನ್ನು ಬಳಸಿ, ತಾವು ಅಭ್ಯಾಸ ಮಾಡಿದಂತೆ ಚಿತ್ರ ಬರೆದರು. ಒಂದೂವರೆ ಗಂಟೆಯಲ್ಲಿ ಮಕ್ಕಳ ಮನಸ್ಸಿನ ಚಿತ್ರಗಳು ಹಾಳೆಗಳಲ್ಲಿ ಜೀವ ತಳೆದವು.
ಹುಬ್ಬಳ್ಳಿ ಧಾರವಾಡ ಅವಳಿನಗರದ 45 ಸರಕಾರಿ ಹಾಗೂ ಖಾಸಗಿ ಕಾಲೇಜಿನ 600ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 1 ರಿಂದ 4ನೇ ತರಗತಿ ವಿದ್ಯಾರ್ಥಿಗಳು ಅರಣ್ಯ ನಾಶದಿಂದ ಉಂಟಾಗುವ ಪರಿಣಾಮಗಳು, 5 ರಿಂದ 7 ರ ವರೆಗೂ ವಾಯು ಮಾಲಿನ್ಯ ಕಾರಣ ಅದ್ದರಿಂದ ಉಂಟಾಗುವ ದುಷ್ಪರಿಣಾಮ ಹಾಗೂ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಪರಿಸರ ಮಾಲಿನ್ಯದಿಂದ ಋತುಮಾನಗಳ ಮೇಲೆ ಉಂಟಾಗುತ್ತಿರುವ ಬದಲಾವಣೆ ಹಾಗೂ ಪರಿಣಾಮಗಳು ಎಂಬ ಸಂದೇಶಯುಳ್ಳ ಜಾಗೃತಿ ಚಿತ್ರಗಳು ವಿದ್ಯಾರ್ಥಿಗಳ ಕುಂಚದಿಂದ ಮೂಡಿಬಂದವು.
ವಿದ್ಯಾರ್ಥಿಗಳು ಚಿತ್ರ ಬಿಡಿಸಿದ ಬಳಿಕ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಅಕಾಡೆಮಿ ಡೀನ್ ಡಾ. ಪಿ.ಜಿ. ತೆವರಿ, ವಿದ್ಯಾರ್ಥಿ ವ್ಯವಹಾರಗಳ ಡೀನ್ ಸಂಜಯ ಕೊಟಬಾಗಿ, ಪ್ರಾದೇಶಿಕ ಸಾರಿಗೆ ಕಚೇರಿ ಆಯುಕ್ತ ಕೆ. ದಾಮೋದರ, ಹೆಚ್ಚುವರಿ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಭೀಮನಗೌಡ ಪಾಟೀಲ, ವೀರೇಶ ಬಾಳಿಕಾಯಿ ಇದ್ದರು.