ಹೊಸದಿಗಂತ ಡಿಜಿಟಲ್ ಡೆಸ್ಕ್:
2024ರ ಐಪಿಎಲ್ ಟೂರ್ನಿಗೆಭರದ ಸಿದ್ದತೆಗಳು ನಡೆಯುತ್ತಿವೆ. ಇದಕ್ಕೂ ಮುನ್ನ ಆಟಗಾರರ ಹರಾಜು ಪಕ್ರಿಯೆ ನಡೆಯುತ್ತಿದ್ದು, ಇಂದು ಆಟಗಾರರ ಟ್ರಾನ್ಸ್‌ಪರ್‌ಗೆ ಕಡೆಯ ದಿನವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಸ್ಟಾರ್ ಆಲ್ರೌಂಡರ್ ಶೆಹಬಾಜ್ ಅಹಮದ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್‌ಗೆ ನೀಡಿ ಆರೆಂಜ್ ಆರ್ಮಿಯಲ್ಲಿದ್ದ ಮಯಾಂಕ್ ಡಾಗರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಶೆಹಬಾಜ್ ಅಹಮದ್, ಐಪಿಎಲ್‌ನಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಆದರೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶೆಹಬಾಜ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಕಳೆದ ಆವತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಶೆಹಬಾಜ್ 10 ಪಂದ್ಯಗಳನ್ನಾಡಿ ಕೇವಲ 42 ರನ್ ಗಳನ್ನಷ್ಟೇ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ ಕೇವಲ ಒಂದು ವಿಕೆಟ್ ಕಬಳಿಸಿದ್ದರು.
ಇನ್ನೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಆಲ್ರೌಂಡರ್ ಮಯಾಂಕ್ ಡಾಗರ್ ಇದೀಗ ಆರ್‌ಸಿಬಿ ತೆಕ್ಕೆಗೆ ಬಂದಿದ್ದಾರೆ. ಈ ಮೊದಲು ಕಿಂಗ್ಸ್ ಇಲೆವನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಮಯಾಂಕ್ ಡಾಗರ್ ಕೇವಲ 3 ಪಂದ್ಯಗಳನ್ನಾಡಿ ಒಂದು ವಿಕೆಟ್ ಕಬಳಿಸಿದ್ದರು.