ಕಳೆದ 10 ವರ್ಷಗಳಲ್ಲಿ ತೆಲಂಗಾಣಕ್ಕಾಗಿ ಕೆಸಿಆರ್‌ ಏನು ಮಾಡಿದ್ದಾರೆ: ರಾಹುಲ್​ ಗಾಂಧಿ ಪ್ರಶ್ನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ 10 ವರ್ಷಗಳಲ್ಲಿ ತೆಲಂಗಾಣಕ್ಕಾಗಿ ಬಿಆರ್‌ಎಸ್‌ ನಾಯಕ, ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರು ಏನು ಮಾಡಿದ್ದಾರೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರಶ್ನಿಸಿದ್ದಾರೆ.

ಇಂದು ಸಂಗಾರೆಡ್ಡಿ ಜಿಲ್ಲೆಯ ಆಂಧೋಲ್‌ನಲ್ಲಿ ಕಾಂಗ್ರೆಸ್​ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣೆಯಲ್ಲಿ ಬಿಆರ್‌ಎಸ್​, ಬಿಜೆಪಿ ಮತ್ತು ಎಐಎಂಐಎಂ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಕಾಂಗ್ರೆಸ್​ ಪಕ್ಷವನ್ನು ಸೋಲಿಸಲು ಕುತಂತ್ರ ನಡೆಸಿವೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೊರೆಗಳ ಸರ್ಕಾರಕ್ಕೂ, ಜನಸಾಮಾನ್ಯರ ಸರ್ಕಾರಕ್ಕೂ ವ್ಯತ್ಯಾಸ ತೋರಿಸುತ್ತೇವೆ. ಆರು ಗ್ಯಾರಂಟಿಗಳನ್ನು ಜಾರಿಗೊಳಿಸಿ ಜನಪರ ಆಡಳಿತ ನೀಡುತ್ತೇವೆ. ತಮ್ಮ ಹತ್ತು ವರ್ಷಗಳಲ್ಲಿ ಬಿಆರ್‌ಎಸ್ ಏನು ಮಾಡಿದೆ ಎಂದು ಕೆಸಿಆರ್ ತಿಳಿಸುವರೇ ಎಂದು ​ ಸವಾಲು ಹಾಕಿದರು. ಇದೇ ವೇಳೆ, ಬಿಆರ್ ಎಸ್​ ಮತ್ತು ಬಿಜೆಪಿ ನಡುವೆ ಉತ್ತಮ ಸ್ನೇಹವಿದೆ. ದೆಹಲಿಯಲ್ಲಿ ಮೋದಿಗೆ ಕೆಸಿಆರ್​​ ಹಾಗೂ ತೆಲಂಗಾಣದಲ್ಲಿ ಕೆಸಿಆರ್​ಗೆ ಮೋದಿ ಸಹಾಯ ಮಾಡುತ್ತಾರೆ ಎಂದು ದೂರಿದರು.

ತೆಲಂಗಾಣಕ್ಕಾಗಿ ಹುತಾತ್ಮರಾದ ಹೋರಾಟಗಾರರ ಕುಟುಂಬಕ್ಕೆ 2250 ಚದರಡಿ ನಿವೇಶನ ನೀಡಲಾಗುವುದು. ಪ್ರತಿ ಮಂಡಲದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದೊಂದಿಗೆ ಶಾಲೆಗಳನ್ನು ನಿರ್ಮಿಸಲಾಗುವುದು. ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳಿಗೆ 5 ಲಕ್ಷ ರೂ.ಗಳ ಯುವಜನ ವಿಕಾಸ್ ಯೋಜನೆ ಅನುಷ್ಠಾನಗೊಳಿಸಲಾಗುವುದು. ಈ ಹಣವನ್ನು ಯುವಕರು ಓದಲು ಬಳಸಬಹುದು ಹಾಗೂ ಕೋಚಿಂಗ್ ತೆಗೆದುಕೊಳ್ಳಲು ಕೂಡ ಉಪಯೋಗವಾಗುತ್ತದೆ. ರೈತರಿಗೆ ಪ್ರತಿ ಎಕರೆಗೆ 15 ಸಾವಿರ ರೂ.ನಂತೆ ಆರ್ಥಿಕ ನೆರವು ನೀಡಲಾಗುವುದು. 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು. ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2,500 ರೂ. ಜಮೆ ಮಾಡಲಾಗುವುದು. ಭೂರಹಿತ ಕೃಷಿ ಕೂಲಿಕಾರರಿಗೆ ವರ್ಷಕ್ಕೆ 12 ಸಾವಿರ ರೂ. ನೆರವು ಕಲ್ಪಿಸಲಾಗುವುದು ಎಂದು ರಾಹುಲ್​ ಗಾಂಧಿ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!