ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Money Laundering Case) ಸದ್ಯ ಜಾಮೀನು (Bail) ಪಡೆದುಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರಿಗೆ ವಿದೇಶ ಪ್ರವಾಸಕ್ಕೆ ದೆಹಲಿ ನ್ಯಾಯಾಲಯ (Delhi Court) ಅನುಮತಿ ನೀಡಿದೆ.
ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರು ನವೆಂಬರ್ 29 ರಿಂದ ಡಿಸೆಂಬರ್ 3 ರವರೆಗೆ ದುಬೈಗೆ (Dubai) ಪ್ರಯಾಣಿಸಲು ಅನುಮತಿ ನೀಡಿದರು.
ದುಬೈನಲ್ಲಿ ನಡೆಯಲಿರುವ COP28 ಸ್ಥಳೀಯ ಹವಾಮಾನ ಆಕ್ಷನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಡಿ.ಕೆ ಶಿವಕುಮಾರ್ ಅವರನ್ನು COP28 ಅಧ್ಯಕ್ಷ-ನಿಯೋಜಿತ ಹಿಸ್ ಎಕ್ಸಲೆನ್ಸಿ ಡಾ ಸುಲ್ತಾನ್ ಅಹ್ಮದ್ ಅಲ್ ಜಾಬರ್ ಮತ್ತು ಹವಾಮಾನ ಮಹತ್ವಾಕಾಂಕ್ಷೆ ಮತ್ತು ಪರಿಹಾರದ ಕುರಿತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವಿಶೇಷ ಪ್ರತಿನಿಧಿ ಮೈಕೆಲ್ ಆರ್ ಬ್ಲೂಮ್ಬರ್ಗ್ ಅವರು ಆಹ್ವಾನಿಸಿದ್ದಾರೆ.
ಭಾರತದ ಸಂವಿಧಾನದ 21ನೇ ವಿಧಿಯ ಪ್ರಕಾರ ವಿದೇಶಕ್ಕೆ ಪ್ರಯಾಣಿಸುವ ಹಕ್ಕು ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಹೇಳಿದರು.
ಕರ್ನಾಟಕದಿಂದ ಎಂಟು ಬಾರಿ ಶಾಸಕರಾಗಿದ್ದಾರೆ ಪ್ರಸ್ತುತ ಅವರು ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಗಮನಿಸಿದ ನ್ಯಾಯಾಧೀಶರು, ಅವರು ಭಾರತದಿಂದ ಪಲಾಯನ ಮಾಡುವ ಸಾಧ್ಯತೆ ತುಂಬಾ ವಿರಳ ಎಂದು ಹೇಳಿದರು. ಅರ್ಜಿದಾರರ ಅರ್ಜಿಯನ್ನು ಅನುಮತಿಸಲು ಯಾವುದೇ ಅಡ್ಡಿಯಿಲ್ಲ. ಆದ್ದರಿಂದ ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ಶಿವಕುಮಾರ್ ಸಲ್ಲಿಸಿದ ಅರ್ಜಿಯನ್ನು ಅನುಮತಿಸಲಾಗಿದೆ ಮತ್ತು ನವೆಂಬರ್ 29, 2023 ರಿಂದ ಡಿಸೆಂಬರ್ 3 ರವರೆಗೆ ಜಾರಿಗೆ ಬರುವಂತೆ ದುಬೈಗೆ ಪ್ರಯಾಣಿಸಲು ಅವರಿಗೆ ಅನುಮತಿ ನೀಡಲಾಗಿದೆ.