ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹದ ಬಳಿ ವಾಯು ಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮ, ಬಂಗಾಳ ಕೊಲ್ಲಿಯಲ್ಲಿ ಚಂಡ ಮಾರುತ ಸೃಷ್ಟಿಯಾಗುವ ಭೀತಿ ಎದುರಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹದ ಬಳಿ ಸೃಷ್ಟಿಯಾಗಿರುವ ವಾಯು ಭಾರ ಕುಸಿತದಿಂದ ಚಂಡ ಮಾರುತ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಈ ಚಂಡ ಮಾರುತವು ಪಶ್ಚಿಮ ಹಾಗೂ ವಾಯುವ್ಯ ದಿಕ್ಕಿನತ್ತ ಸಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.
ಮುಂದಿನ 48 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯ ಆಗ್ನೇಯ ಭಾಗಕ್ಕೂ ಈ ಚಂಡ ಮಾರುತ ಸಾಗಬಹುದಾಗಿದೆ. ಇನ್ನು ಭಾರತದ ಯಾವ ಭಾಗದ ಸಾಗರ ತೀರಕ್ಕೆ ಚಂಡ ಮಾರುತ ಅಪ್ಪಳಿಸಬಹುದು ಎಂದು ಇನ್ನೂ ಕೂಡಾ ನಿಖರವಾಗಿ ಅಂದಾಜು ಮಾಡಲಾಗಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದಾಗ್ಯೂ ಭಾರತದ ಕರಾವಳಿಗೆ ನವೆಂಬರ್ 28 ಹಾಗೂ ನವೆಂಬರ್ 29 ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.