ಹೊಸದಿಗಂತ ವರದಿ,ಮಡಿಕೇರಿ :
ಅಲೆಮನೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಅತ್ಯಂತ ಆಘಾತಕಾರಿ ಹಾಗೂ ಅಮಾನವೀಯವಾದ ಘಟನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಅಲ್ಲದೆ ಈ ಪ್ರಕರಣದಲ್ಲಿ ಯಾರ ಯಾರ ಪಾತ್ರ ಇದೆ ಎಂಬುದು ಸರಕಾರಕ್ಕೆ ಗೊತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣವಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇಲ್ಲಿಗೆ ಸಮೀಪದ ಹಾಕತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ತಾನು ಖಂಡಿಸುವುದಾಗಿ ತಿಳಿಸಿದ. ಅವರು, ಇದು ಸ್ಯಾಂಪಲ್ ಅಷ್ಟೇ, ಆರೋಗ್ಯ ಇಲಾಖೆ ಅಧಿಕಾರಿಗಳು ಗೊತ್ತೇ ಇಲ್ಲದಂತೆ ನಟಿಸ್ತಾರೆ. ಹೀಗಾಗಿ ಸರ್ಕಾರ ಎಲ್ಲವನ್ನೂ ಕೂಲಂಕೂಷವಾಗಿ ಪರಿಶೀಲನೆ ಮಾಡಿ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಂಪುಟ ದರ್ಜೆ ಸ್ಥಾನಮಾನ ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಏನು ಮಾಡಿಕೊಳ್ಳುತ್ತಾರೋ ಅದು ಅವರ ಪಕ್ಷಕ್ಕೆ ಬಿಟ್ಟಿರುವ ವಿಚಾರ. ಆದರೆ ನಮಗೆ ಬೇಕಾಗಿರುವುದು ರಾಜ್ಯದಲ್ಲಿ ಬರಗಾಲಕ್ಕೆ ಪರಿಹಾರ. ಆ ಬರಗಾಲಕ್ಕೆ ಒಂದು ಕಡೆ ದುಡ್ಡಿಲ್ಲ, ಕೇಂದ್ರ ಬಿಡುಗಡೆ ಮಾಡಿಲ್ಲ ಎಂದು ಅರ್ಜಿ ಹಾಕಿಕೊಂಡಿದ್ದಾರೆ. ಆದರೆ ಈಗ ತಾನೆ ಎಲ್ಲಾ ಸಚಿವರಿಗೆ ಹೊಸ ಕಾರು ಕೊಡಿಸಿದ್ದಾರೆ. ಅದಕ್ಕೆ ಒಂಭತ್ತೂವರೆ ಕೋಟಿ ಖರ್ಚು ಮಾಡಿದ್ದಾರೆ. ಮನೆ ನವೀಕರಣಕ್ಕೆ ಕೋಟ್ಯಂತರ ಖರ್ಚು ಮಾಡಿದ್ದಾರೆ. ಇದಕ್ಕೆ ಎಷ್ಟೊಂದು ಹಣ ಖರ್ಚಾಗುತ್ತದೆ ಎಂದು ಪ್ರಶ್ನಿಸಿದರು.
ಬರಗಾಲದ ಹಣವಲ್ಲ: ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ 800 ಕೋಟಿ ರೂ. ಇರುವುದು ಬರಗಾಲ ಹಣ ಅಲ್ಲ. ಅದು ಕುಡಿಯುವ ನೀರು ಮತ್ತು ಮೇವಿಗಾಗಿ ಮೀಸಲಿರಿಸಿರುವ ಹಣ. ರೈತರ ಪರಿಸ್ಥಿತಿ ಏನು ಎನ್ನುವುದಕ್ಕೆ ಇವರು ಚಿಂತಿಸುತ್ತಿಲ್ಲ. ಈಗ ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಿದರೆ ದುಡ್ಡು ಎಷ್ಟು ಖರ್ಚಾಗುತ್ತದೆ. ಇದಕ್ಕೆ ಕಾಂಗ್ರೆಸ್ ಪಕ್ಷದಿಂದ ಹಣ ಕೊಡುತ್ತಾರಾ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ನಡೆಸಿದ ಜನತಾ ದರ್ಶನವನ್ನು ಜನಸ್ಪಂದನಾ ಎಂದಿದ್ದಾರೆ.. ಅಧಿಕಾರಿಗಳನ್ನು ಕರೆಸಿ ನಾಡಿನ ಜನತೆಯ ಸಮಸ್ಯೆ ಆಲಿಸಿದ್ದಾರೆ. ಈಗಲಾದರೂ ಇವರಿಗೆ ರಾಜ್ಯದ ಜನತೆಯ ನೈಜ ಪರಿಸ್ಥಿತಿ ಅರ್ಥವಾಗಿದೆ ಎಂದುಕೊಂಡಿದ್ದೇನೆ. ವಿವಿಧ ಸಮಸ್ಯೆಗಳು ಜನಸ್ಪಂದನದಲ್ಲಿ ಅರ್ಥವಾಗಿರಬಹುದು. ಒಬ್ಬ ಸಿಎಂ ಜನಸ್ಪಂದನಾ ಮಾಡುವುದನ್ನು ನಾನು ಅಭಿನಂದಿಸುತ್ತೇನೆ ಎಲ್ಲವನ್ನೂ ಟೀಕಿಸುವುದಿಲ್ಲ. ಮುಂದಿನ ಮೂರು ತಿಂಗಳಲ್ಲಿ ಮತ್ತೆ ಜನಸ್ಪಂದನಾ ಮಾಡುತ್ತೇನೆ ಎಂದಿದ್ದಾರೆ. ಅಧಿಕಾರಿಗಳಿಗೆ ಮೂರು ತಿಂಗಳ ಗಡುವು ನೀಡಿದ್ದಾರೆ. ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ಈಗ ಅವರಿಗೆ ಅರ್ಥ ಆಗಿರಬಹುದು ಎಂದು ವ್ಯಂಗವಾಡಿದರು.
ನಾನು ಜನತಾ ದರ್ಶನ ಮಾಡಿದಾಗ ಬೆಳಗ್ಗೆ 9 ರಿಂದ ರಾತ್ರಿ 1 ಗಂಟೆವರೆಗೆ ಮಾಡಿದ್ದೆ. ಅವತ್ತು ಇದ್ದ ಸಮಸ್ಯೆಗಳು ಈಗಲೂ ಮುಂದುವರಿದಿವೆ. ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್ ಅಶೋಕ್ ಅವರು ಕೂಡಾ ಮಾಡಿದ್ದರು. ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಅಂತ ಮಾಡಿದ್ರು. ತಿಂಗಳಿಗೆ ಒಂದು ಗ್ರಾಮಕ್ಕೆ ಅವರು ಭೇಟಿ ನೀಡಿದ್ದರು. ಈಗ ಸಿಎಂ ಅವರು ಜನಸ್ಪಂದನಾ ಮಾಡಿದ್ದಾರೆ. ಅವರಿಗೆ ಮನವರಿಕೆ ಆಗಿರುವ ಕಷ್ಟಗಳನ್ನು ಸಿಎಂ ಬಗೆಹರಿಸಲಿ. ಆಗ ಅವು ಅರ್ಥಪೂರ್ಣ ಆಗುತ್ತವೆ ಎಂದು ಕುಮಾರಸ್ವಾಮಿ ನುಡಿದರು.
ಮಾಜಿ ಸಚಿವ ಸಾ.ರಾ ಮಹೇಶ್, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಮಹದೇವ್, ಜೆಡಿಎಸ್ ಮುಖಂಡ ಮನ್ಸೂರ್ ಆಲಿ ಮತ್ತಿತರರು ಇದ್ದರು.