ಹೊಸದಿಗಂತ ವರದಿ, ಮೈಸೂರು:
ಬರಗಾಲ ತಲೆದೋರಿರುವ ಹಿನ್ನಲೆಯಲ್ಲಿ ಜನ,ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುವುದನ್ನು ನಿವಾರಿಸಲು ಕೆರೆಗಳಿಗೆ ನೀರು ತುಂಬಿಸಲು ಸಂಬo ಧಿಸಿದ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸೂಚಿಸಿದರು.
ಜಿಲ್ಲಾಡಳಿತದ ವತಿಯಿಂದ ಬುಧವಾರ ಮೈಸೂರು ಜಿಲ್ಲೆಯ ತಿ.ನರಸೀಪುರದ ವಿದ್ಯೋದಯ ಶಿಕ್ಷಣ ಸಂಸ್ಥೆ ಸಭಾಂಗದಲ್ಲಿ ಆಯೋಜಿಸಲಾಗಿದ್ದ ಜನತಾದರ್ಶನ ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಅನೇಕ ಸಮಸ್ಯೆಗಳನ್ನು ಹೊತ್ತು ಬಂದಿದ್ದ ಜನರ ಕಷ್ಟ ಆಲಿಸಿ, 167 ಅರ್ಜಿದಾರರ ಅಹವಾಲನ್ನು ಸ್ವೀಕರಿಸಿ, ಸಮಸ್ಯೆ ಆಲಿಸಿದರು. ಅದಲ್ಲದೆ, ಅರ್ಜಿ ಸಲ್ಲಿಸದೆ ಇದ್ದಂತಹ ಜನರನ್ನೂ ಕರೆದು ಅವರ ಕುಂದು ಕೊರತೆಗಳನ್ನು ವಿಚಾರಿಸಿದರು. ಅಹವಾಲು ಸ್ವೀಕರಿಸಿ ಸಮಸ್ಯೆ ಬಗೆಹರಿಸುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ತಿಳಿಸಿದರು.
ತಿ.ನರಸೀಪುರ ತಾಲ್ಲೂಕಿನಲ್ಲಿ ಬರ ಆವರಿಸಿದ್ದು, ಜಾನವಾರುಗಳಿಗೆ ಕುಡಿಯಲು ನೀರಿನ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ಎಲ್ಲಾ ಕೆರೆಗಳನ್ನು ತುಂಬಿಸುವoತೆ ನೀರಾವರಿ ಇಲಾಖೆಯ ಎಂಜಿನಿಯರ್‌ಗೆ ಈ ಮೊದಲೇ ಸೂಚಿಸಲಾಗಿತ್ತು. ಅದರಂತೆ ಬಹುತೇಕ ಕೆರೆಗಳಿಗೆ ನೀರು ತುಂಬಿಸಿದ್ದು, ಬಾಕಿ ಉಳಿದಿರುವ ಕೆರೆಗಳಿಗೆ ಕೂಡಲೇ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.