ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವರ್ಷ ನವೆಂಬರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮತ್ತು ಆತನ ಸಹಾಯಕನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಚಾರ್ಜ್‌ಶೀಟ್ ಸಲ್ಲಿಸಿದೆ.
ಆರೋಪಪಟ್ಟಿಯಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಮತ್ತು ಸಹ ಆರೋಪಿ ಸೈಯದ್ ಶಾರಿಕ್ ಹೆಸರು ಉಲ್ಲೇಖಿಸಲಾಗಿದೆ.
ಕಳೆದ ವರ್ಷ ನವೆಂಬರ್ 19ರಂದು ಶಾರಿಕ್ ಆಟೊರಿಕ್ಷಾದಲ್ಲಿ ಪ್ರೆಶರ್ ಕುಕ್ಕರ್ನಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸಾಗಿಸುತ್ತಿದ್ದಾಗ ಅದು ಸ್ಫೋಟಗೊಂಡಿತ್ತು. ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಮಂಗಳೂರಿನ ಕದ್ರಿ ಮಂಜುನಾಥ ದೇಗುಲದಲ್ಲಿ ಐಇಡಿ ಅಳವಡಿಸಲು ಈ ಆರೋಪಿ ಯೋಜಿಸಿದ್ದ. ಆದರೆ, ಅದು ಮಾರ್ಗಮಧ್ಯೆದಲ್ಲೇ ಆಕಸ್ಮಿಕವಾಗಿ ಸ್ಫೋಟಗೊಂಡಿತ್ತು.
NIA Chargesheets 2 in IS-Backed Mangaluru Pressure Cooker IED Blast Case pic.twitter.com/WwZZEJiTP6
— NIA India (@NIA_India) November 29, 2023
ಇದರ ನಂತರ ನವೆಂಬರ್ 23ರಂದು ಭಾರತೀಯ ದಂಡ ಸಂಹಿತೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ 1908ರ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿತ್ತು. ಈ ವರ್ಷದ ಜುಲೈನಲ್ಲಿ ಮೊಹಮ್ಮದ್ ಶಾರಿಕ್ ಹಾಗೂ ಸಹ ಆರೋಪಿ ಸೈಯದ್ ಇಬ್ಬರನ್ನೂ ಎನ್‌ಐಎ ಬಂಧಿಸಿತ್ತು. ಎನ್‌ಐಎ ತನಿಖೆ ಪ್ರಕಾರ, ಶಾರಿಕ್ ಮತ್ತು ಸೈಯದ್, ಆನ್‌ಲೈನ್ ಹ್ಯಾಂಡ್ಲರ್‌ನೊಂದಿಗೆ ಶರಿಯಾ ಕಾನೂನು ಸ್ಥಾಪಿಸುವ ಪಿತೂರಿಯ ಭಾಗವಾಗಿ ಸ್ಫೋಟಕ್ಕೆ ಪ್ಲಾನ್ ಮಾಡಿದ್ದರು.ಪಿತೂರಿ ಭಾಗವಾಗಿ, ಮೊಹಮ್ಮದ್ ಶಾರಿಕ್ ಪ್ರೆಶರ್ ಕುಕ್ಕರ್ನ ಐಇಡಿ ಸಿದ್ಧಪಡಿಸಿದ್ದ. ಈ ಸ್ಫೋಟಕಕ್ಕೆ ಸೈಯದ್ ವಸ್ತುಗಳ ನೆರವು ನೀಡಿದ್ದ. 2020ರ ನವೆಂಬರ್‌ನಲ್ಲಿ ಮಂಗಳೂರು ನಗರದಲ್ಲಿ ಭಯೋತ್ಪಾದನೆ ಪರ ಬರಹದಂತಹ ಆರೋಪಗಳಿಗೆ ಸಂಬಂಧಿಸಿದಂತೆ ಶಾರಿಕ್ನನ್ನು ರಾಜ್ಯ ಪೊಲೀಸರು ಬಂಧಿಸಿದ್ದರು. ಈತ ಮತ್ತು ಈತ ಸಹಚರರು ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್)ಅನ್ನು ಬೆಂಬಲಿಸಿ ಬರಹಗಳನ್ನು ಬರೆದಿದ್ದರು ಎಂದು ಆರೋಪಿಸಲಾಗಿದೆ.