ಹೊಸದಿಗಂತ ವರದಿ, ಹಾಸನ:
ಮದುವೆಯಾಗಲು ನಿರಾಕರಿಸಿದರು ಎಂಬ ಕಾರಣದಿಂದ ಸಿನಿಮೀಯ ರೀತಿಯಲ್ಲಿ ಯುವತಿಯೋರ್ವಳನ್ನು ಕಾರಿನಲ್ಲಿ ಅಪಹರಿಸಿ ಪರಾರಿಯಾಗಿರುವ ಘಟನೆ ನಗರದ ಹೊರ ವಲಯದ ಬಿಟ್ಟಗೌಡನಹಳ್ಳಿ ಬಳಿ ಗುರುವಾರ ಬೆಳ್ಳಂ ಬೆಳಿಗ್ಗೆ ನಡೆದಿದೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಯಾಗಿರುವ ಯುವತಿ ಅರ್ಪಿತಾ. ಈ ಬೆಳವಣಿಗೆ ಯುವತಿ ಪೋಷಕರಲ್ಲಿ ಆತಂಕ ತರಿಸಿದ್ದರೆ, ನೆರೆ ಹೊರೆಯವರನ್ನು ಅಕ್ಷರಶಃ ಬೆಚ್ಚಿ ಬೀಳಿಸಿದೆ.
ಘಟನೆ ವಿವರ : ಅರ್ಪಿತಾಳ ಹತ್ತಿರದ ಸಂಬಂಧಿಯೂ ಆಗಿರುವ ರಾಮು ಎಂಬಾತ ತನ್ನ ಪೋಷಕರನ್ನು ಕರೆದುಕೊಂಡು ಅರ್ಪಿತಾ ಮನೆಗೆ ಹೋಗಿ ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ ಎಂದು ಕೇಳಿದ್ದ. ಮದುವೆ ಪ್ರಸ್ತಾಪಕ್ಕೆ ಯುವತಿ ಹಾಗೂ ಮನೆಯವರು ಸುತಾರಾಂ ನಿರಾಕರಿಸಿ, ನಾವು ಮದುವೆ ಮಾಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರು. ಅರ್ಪಿತಾ ಹಾಗೂ ಮನೆಯವರು ಮದುವೆಗೆ ಒಪ್ಪದ ಹಿನ್ನೆಲೆ ಶಿಕ್ಷಕಿಯನ್ನು ಪ್ಲಾನ್ ಮಾಡಿ ಇನ್ನೋವಾ ಕಾರಿನಲ್ಲಿ ಬಂದು ಅಪಹರಣ ಮಾಡಿಕೊಂಡು ಹೋಗಿದ್ದಾರೆ.
ರಾಮು ಸೇರಿ ಮೂರ್ನಾಲ್ಕು ಮಂದಿ ಅಪಹರಣ ಮಾಡುವ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅರ್ಪಿತಾ ರಸ್ತೆ ನಡೆದುಕೊಂಡು ಹೋಗುತ್ತಿದ್ದ ವೇಳೆ ದೂರದಲ್ಲಿ ಇನ್ನೋವಾ ಕಾರುನಿಲ್ಲಿಸಿಕೊಂಡು ಇಬ್ಬರು ಫೋನ್‌ನಲ್ಲಿ ಮಾತನಾಡುವಂತೆ ನಿಂತಿದ್ದರು. ಮನೆಯಿಂದ ಬಂದು ಶಾಲೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ ಏಕಾಏಕಿ ಹಿಡಿದು ಕಾರಿನೊಳಗೆ ಹಾಕಿಕೊಂಡು ಪರಾರಿಯಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಎಸ್ಪಿ ಮೊಹಮ್ಮದ್ ಸುಜೀತಾ ಹಾಗೂ ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರಿಂದ ಮಾಹಿತಿ ಪಡೆದರು.
ಮೂರು ತಂಡ ರಚನೆ: ಸದ್ಯದ ಮಾಹಿತಿ ಪ್ರಕಾರ ಯುವತಿಯನ್ನು ಅಪಹರಿಸಿ ಮಡಿಕೇರಿ ಕಡೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಕೊಡ್ಲಿಪೇಟೆ, ಶನಿವಾರ ಸಂತೆ ಮೂಲಕ ಕೊಡಗಿಗೆ ಹೋಗಿರಬಹುದು ಎಂದು ಮೊಬೈಲ್ ನೆಟ್ವರ್ಕ್ ಆಧರಿಸಿ ಪತ್ತೆಗಾಗಿ ರಚನೆ ಮಾಡಿರುವ ಮೂರು ತನಿಖಾ ತಂಡಗಳು ಅಪಹರಣಕಾರರನ್ನು ಬೆನ್ನಟ್ಟಿವೆ.
ಕೊಡಗು ಪೊಲೀಸರ ಸಹಕಾರದೊಂದಿಗೆ ಯುವತಿ ಕಿಡ್ನಾಪ್ ಮಾಡಿರೋ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಎಸ್ಪಿ ಮೊಹಮದ್ ಸುಜೀತಾ ಅವರು ನಗರ ಠಾಣೆಯಲ್ಲೇ ಹಾಜರಿದ್ದು ಘಟನೆ ಸಂಬಂಧ ಇಂಚಿಂಚು ಮಾಹಿತಿ ಪಡೆಯುತ್ತಿದ್ದಾರೆ. ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಆರೋಪಿ ಅಂಡ್ ಗ್ಯಾಂಗ್ ವಶಕ್ಕೆ ಪಡೆಯಲು ಪ್ಲಾನ್ ಮಾಡಿದ್ದಾರೆ.
ಈ ಪ್ರಕರಣ ಕುರಿತು ಮಾತನಾಡಿದ ಎಸ್ಪಿ ಮೊಹಮದ್ ಸುಜೀತಾ ಅವರು, ಯುವತಿ ಗ್ರಾಮದ ಆರಾಧನಾ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಇಂದು ರಜೆ ಇತ್ತು. ಆದರೂ ಹೊರಗೆ ಏಕೆ ಬಂದಿದ್ದರು. ಶಾಲೆಯಲ್ಲಿ ಏನಾದರೂ ಕಾರ್ಯಕ್ರಮ ಇತ್ತಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪತ್ತೆಗಾಗಿ 3 ತಂಡ ರಚಿಸಲಾಗಿದೆ. ವರಸೆಯಲ್ಲಿ ಅರ್ಪಿತಾಗೆ ರಾಮು ಮಾವ ಆಗಬೇಕಂತೆ. ಹಿಂದೆ ಮದುವೆ ಪ್ರಸ್ತಾಪ ಸಹ ನಡೆದಿತ್ತು ಎಂಬ ಮಾಹಿತಿ ಇದೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನಾನು ಮದುವೆಯಾಗಿದ್ದೇನೆ, ಅರ್ಪಿತಾಳೊಂದಿಗೆ ಠಾಣೆಗೆ ಬರುತ್ತೇನೆ ಎಂದು ರಾಮು ಫೋನ್ ಮಾಡಿದ್ದಾನೆ ಎನ್ನಲಾಗಿದ್ದು, ಮಗಳು ಸುರಕ್ಷಿತವಾಗಿ ಬಂದರೆ ಸಾಕು ಎಂದು ಹೆತ್ತವರು ಕಣ್ಣೀರಿಡುತ್ತಾ ನಗರಠಾಣೆಯಲ್ಲಿ ಕಾಯುತ್ತಿದ್ದಾರೆ.