ಹೊಸದಿಗಂತ ವರದಿ ಚಿಕ್ಕಮಗಳೂರು:
ಹೆಲ್ಮೆಟ್ ಧರಿಸದ ಕಾರಣಕ್ಕೆ ಯುವ ವಕೀಲರೊಬ್ಬರನ್ನು ಠಾಣೆಗೆ ಕರೆತಂದು ಹಿಗ್ಗಾ ಮುಗ್ಗ ಹಲ್ಲೆ ನಡೆಸಿದ ಆರೋಪದ ಮೇಲೆ ನಗರ ಠಾಣೆಯ ಪಿಎಸ್‌ಐ ಸೇರಿದಂತೆ 6 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಪಡಿಸಿ ಎಸ್ಪಿ ವಿಕ್ರಮ ಆಮಟೆ ಆದೇಶಿಸಿದ್ದಾರೆ.
ಗುರುವಾರ ರಾತ್ರಿ 8 ಗಂಟೆ ವೇಳೆಗೆ ವಕೀಲ ಪ್ರೀತಂ ಎಂಬಾತನನ್ನು ಮಾರ್ಕೆಟ್ ರಸ್ತೆಯ ನಗರ ಠಾಣೆ ಮುಂಭಾಗವೇ ತಡೆದಿದ್ದ ಪೊಲೀಸರು ಹೆಲ್ಮೆಟ್ ಧರಿಸದ ಬಗ್ಗೆ ಪ್ರಶ್ನಿಸಿದ್ದರು. ಅಲ್ಲದೆ ಆತನನ್ನು ಠಾಣೆಗೆ ಕರೆದೊಯ್ದು ಮನಸೋ ಇಚ್ಛೆ ಹಲ್ಲೆ ನಡೆಸಿದ್ದರು. ಇದರಿಂದ ವಕೀಲ ಪ್ರೀತಂರ ಎದೆ, ಕೈ ಮತ್ತು ಬೆನ್ನಿನಲ್ಲಿ ಗಾಯವೂ ಉಂಟಾಗಿತ್ತು. ವಿಚಾರ ತಿಳಿದು ಠಾಣೆ ಬಳಿ ಜಮಾಯಿಸಿದ ವಕೀಲರ ಗುಂಪು ಘಟನೆ ಖಂಡಿಸಿ ಶುಕ್ರವಾರ ಬೆಳಗಿನ ಜಾವದ ವರೆಗೆ ಪ್ರತಿಭಟನೆ ನಡೆಸಿದರು. ಹಲ್ಲೆ ನಡೆಸಿದ ಸಿಬ್ಬಂದಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ವಕೀಲರು ಪಟ್ಟುಬಿಡದೆ ರಾತ್ರಿಯಿಡೀ ಸುಮಾರು 6 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಎಸ್ಪಿ ವಿಕ್ರಮ ಆಮಟೆ ಠಾಣೆಗೆ ಆಗಮಿಸಿ ಠಾಣೆಯ ಪಿಎಸ್‌ಐ, ಎಎಸ್‌ಐ, ಮುಖ್ಯಪೇದೆ ಹಾಗೂ ಮೂವರು ಪೇದೆಗಳ ವಿರುದ್ಧ ಐಪಿಸಿ ಸೆಕ್ಷನ್ 307, 324, 506 ಹಾಗೂ 504 ರಡಿ ಪ್ರಕರಣ ದಾಖಲಿಸಿ ಅಷ್ಟೂ ಜನರನ್ನು ಅಮಾನತುಗೊಳಿಸಿ ಎಸ್ಪಿ ಆದೇಶಿಸಿದರು.
ಪೊಲೀಸರ ಹಲ್ಲೆಯಿಂದಾಗಿ ತೀವ್ರ ಗಾಯಗೊಂಡಿರುವ ವಕೀಲ ಪ್ರೀತಂ ನನ್ನು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಮಾನತುಗೊಂಡಿರುವ ಪೊಲೀಸರನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ಮುಂದುವರಿಸಲು ವಕೀಲರ ಸಂಘ ತೀರ್ಮಾನಿಸಿದೆ.