ಹೊಸದಿಗಂತ ವರದಿ ಶಿವಮೊಗ್ಗ:
ಕಾರ್ಮಿಕರ ಮಕ್ಕಳಿಗಾಗಿ ಕಾರ್ಮಿಕ ಇಲಾಖೆಯಿಂದ ನಡೆಸಲಾಗುತ್ತಿದ್ದ ಶಿಶುಪಾಲನಾ ಕೇಂದ್ರಗಳನ್ನು ಮುಚ್ಚಲಾಗಿದೆ. ತಕ್ಷಣ ಇವುಗಳನ್ನು ಪುನರ್ ಆರಂಭಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಒತ್ತಾಯಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಾರ್ಮಿಕರ ಮಕ್ಕಳ ಊಟವನ್ನೂ ಕಿತ್ತುಕೊಳ್ಳುವ ಸ್ಥಿತಿ ರಾಜ್ಯ ಸರ್ಕಾರಕ್ಕೆ ಬಂದಿರುವುದು ದುರದೃಷ್ಟಕರ. ಭಿಕಾರಿ ಸರ್ಕಾರ ಎಂದು ಜನರೇ ಆಕ್ರೋಶ ವ್ಯಕ್ತಪಡಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗಾಗಿ ರಾಜ್ಯದಲ್ಲಿ ಒಟ್ಟು 137 ಶಿಶುಪಾಲನಾ ಕೇಂದ್ರಗಳನ್ನು ನಡೆಸಲಾಗುತ್ತಿತ್ತು. ಮಧ್ಯಾಹ್ನದ ಬಿಸಿಯೂಟವನ್ನು ಇಲ್ಲಿನ ಮಕ್ಕಳಿಗೆ ನೀಡಲಾಗುತ್ತಿತ್ತು. ನುರಿತ ಶಿಕ್ಷಕರಿಂದ ಶೈಕ್ಷಣಿಕ ಚಟುವಟಿಕೆ ನಡೆಸಲಾಗುತ್ತಿತ್ತು. ಆದರೆ ಡಿಸೆಂಬರ್ ಒಂದರಿಂದ ಇವುಗಳನ್ನು ಬಂದ್ ಮಾಡಲಾಗಿದೆ. ಕಾರ್ಮಿಕರ ಮಕ್ಕಳಿಗೆ ಒಂದು ಹೊತ್ತಿನ ಊಟ ಹಾಕಲೂ ಆಗದ ಸ್ಥಿತಿಗೆ ರಾಜ್ಯ ಸರ್ಕಾರ ಬಂದುಬಿಟ್ಟಿದೆ. ಇದು ಮಕ್ಕಳಿಗೆ ಮಾಡಿದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ 4-5 ತಿಂಗಳು ಶೈಕ್ಷಣಿಕ ವರ್ಷ ಇದೆ. ಆದರೆ ಮಧ್ಯಂತರದಲ್ಲಿ ಮಕ್ಕಳನ್ನು ಕೈಬಿಡಲಾಗಿದೆ. ಅವರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಸರ್ಕಾರದ ಬೇಜವಾಬ್ದಾರಿ ವರ್ತನೆಗೆ ಇದು ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಜೊತೆ ಮಾತನಾಡಿದ್ದೇಬೆ. ಅವರು ಸಾಕಷ್ಟು ಸಂಖ್ಯೆಯಲ್ಲಿ ಬೋಗಸ್ ಕಾರ್ಮಿಕ ಕಾರ್ಡ್ಗಳಿವೆ. ಹಾಗಾಗಿ ಈ ಕ್ರಮ ಎಂದು ಹೇಳಿದರು. ರಾಜ್ಯ ಸರ್ಕಾರಕ್ಕೆ ಭ್ರಷ್ಟಾಚಾರ ತಡೆಯುವ ಇಚ್ಛಾಶಕ್ತಿ ಇದ್ದರೆ ಬೋಗಸ್ ಕಾರ್ಡ್ ನೀಡಿದವರು ಮೇಲೆ ಕ್ರಮ ಜರುಗಿಸಬೇಕಿತ್ತು. ಕಾರ್ಮಿಕರ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಎಷ್ಟು ಅಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದಾರೆ? ಎಂದು ಪ್ರಶ್ನಿಸಿದರು.