ಹೊಸದಿಗಂತ ವರದಿ, ಹುಬ್ಬಳ್ಳಿ:
ರಾಜ್ಯ ಸರ್ಕಾರ ಧಾರವಾಡ ಜಿಲ್ಲೆಯ ೨೦೨೩ ನೇ ಸಾಲಿನ ಮುಂಗಾರು ಬೆಳೆಗಳಾದ ಶೇಂಗಾ ಹಾಗೂ ಸೋಯಾಬಿನ್ ಬೆಳೆಗಳ ಮಧ್ಯಂತರ ವಿಮಾ ಪರಿಹಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಅವರಿಗೆ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ. ಶೇಂಗಾ ಮತ್ತು ಸೋಯಾಬಿನ್ ಬೆಳೆಗಳು ಬರಗಾಲದಿಂದ ಬಾರದಿದ್ದರೂ ಕೂಡಾ ಇದುವರೆಗೂ ಮಧ್ಯಂತರ ವಿಮಾ ಪರಿಹಾರ ಬಿಡುಗಡೆಯಾಗಿರುವುದಿಲ್ಲ. ರೈತರನ್ನು ಸಂಕಷ್ಟಕ್ಕೆ ದೂಡುವ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಧಾರವಾಡ ಜಿಲ್ಲಾ ಮಟ್ಟದ ಬೆಳೆ ವಿಮೆಯ ಜಂಟಿ ಸಮಿತಿ ಮಧ್ಯಂತರ ಬೆಳೆ ವಿಮಾ ಪರಿಹಾರ ಬಿಡುಗಡೆ ಮಾಡಲು ತಾಂತ್ರಿಕ ಕಾರಣಗಳೊಂದಿಗೆ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಇದೇ ವರದಿಯನ್ನು ರಾಜ್ಯ ಸರ್ಕಾರವೂ ಕೂಡಾ ಅನುಮೋದಿಸಿ ಸಂಬಂಸಿದ ವಿಮಾ ಕಂಪನಿಗಳಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡುವಂತೆ ಸೂಚಿಸಿತ್ತು. ಆದರೆ ರಾಜ್ಯ ಸರ್ಕಾರವು ನೀಡಿದ ವರದಿಯನ್ನು ವಿಮಾ ಕಂಪನಿಯು ಮಾನ್ಯ ಮಾಡದೇ ರೈತರಿಗೆ ಮಧ್ಯಂತರ ವಿಮಾ ಪರಿಹಾರ ನೀಡಲು ನಿರಾಕರಿಸಿರುವುದು ದುರಾದೃಷ್ಟಕರ.
ರಾಜ್ಯ ಸರ್ಕಾರವು ನೀಡಿದ ವರದಿಯನ್ನು ಅಂಗೀಕರಿಸಿ ಶೇಂಗಾ ಮತ್ತು ಸೋಯಾಬಿನ್ ಬೆಳೆಗಳಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡುವ ಕುರಿತು ಸೂಕ್ತ ನಿರ್ಧಾರ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು. ಈ ಸಮಸ್ಯೆಗಳಿಗೆ ಕಾರಣವಾದ ವಿಮಾ ಕಂಪನಿಯನ್ನು ನೇಮಕ ಮಾಡಿರುವುದು ರಾಜ್ಯ ಸರ್ಕಾರ. ಈ ನಿಟ್ಟಿನಲ್ಲಿ ವಿಮಾ ಕಂಪನಿಗಳ ಮೇಲೆ ಸಂಪೂರ್ಣ ಅಕಾರ ಹೊಂದಿರುವ ರಾಜ್ಯ ಸರ್ಕಾರ ಕಂಪನಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.