ಹೊಸದಿಗಂತ ವರದಿ, ಶಿವಮೊಗ್ಗ:
ಸ್ವದೇಶಿ ಜಾಗರಣ ಮಂಚ್ ವತಿಯಿಂದ ನಗರದಲ್ಲಿಮೊದಲ ಬಾರಿಗೆ ಜನರಿಗೆ ಡಿ.6ರಿಂದ 10ರವರೆಗೆ ಬೃಹತ್ ಸ್ವದೇಶಿ ಮೇಳವನ್ನು ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಲಾಗಿದೆ.
ಮೇಳವನ್ನು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಡಿಸೆಂಬರ್ 06ರ ಸಂಜೆ 6.30 ಕ್ಕೆ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಮೇಳ ನಡೆಯಲಿದೆ.
ಸ್ವದೇಶಿ ಜಾಗರಣ ಮಂಚ್‌ನ ದಕ್ಷಿಣ ಮ‘್ಯ ಕ್ಷೇತ್ರೀಯ ಸಂಘಟಕ್ ಕೆ.ಜಗದೀಶ್ ಶುಕ್ರವಾರ ಫ್ರೀಡಂ ಪಾರ್ಕ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಡಿ.6ರಂದು ಸಂಜೆ 6.30ಕ್ಕೆ ಮೇಳ ಉದ್ಘಾಟನೆಗೊಳ್ಳಲಿದೆ. ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಪರಿಸರ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಮುಖ್ಯ ಭಾಷಣ ಮಾಡುವರು. ಡಿ.6ರಂದು ರಾತ್ರಿ 8.30ಕ್ಕೆ ಜಾನಪದ ಕಲಾ ವೈಭವ ಪ್ರದರ್ಶನಗೊಳ್ಳಲಿದೆ. ಐದು ದಿನಗಳ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು.
ಡಿ.7ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಪ್ರತಿಮಾ ಅಡಿಗ ಅವರು ತಾರಸಿ ತೋಟದ ಬಗ್ಗೆ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
ಮಧ್ಯಾಹ್ನ 3ರಿಂದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಸಹಯೋಗದಲ್ಲಿ ಸಂಘಟನೆಯಿಂದ ಕೃಷಿ ಮಾರುಕಟ್ಟೆ-ಯುವಕರ ಪಾತ್ರದ ಕುರಿತು ಸಂವಾದ ಮತ್ತು ಸಾವಯವ ಕೃಷಿ-ಪ್ರಾತ್ಯಕ್ಷಿಕೆ, ಪ್ರದರ್ಶನ, ವಿಸ್ತರಣೆ ಕಾರ್ಯಗಾರ ನಡೆಯಲಿದೆ ಎಂದು ತಿಳಿಸಿದರು.
ಪ್ರೊ.ಬಿ.ಎಮ್.ಕುಮಾರಸ್ವಾಮಿ, ಡಿ.ಎಸ್.ಅರುಣ್, ಹರ್ಷ ಕಾಮತ್ ಇನ್ನಿತರರು ಇದ್ದರು.