ಹೊಸದಿಗಂತ ವರದಿ, ಹಾಸನ :
ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಕುಡಿಯುವ ನೀರು ಯೋಜನೆಯ ಎರಡನೇ ಪ್ರಾಯೋಗಿಕ ಪರೀಕ್ಷೆ ವೇಳೆಯೂ ಹಲವು ಅನಾಹುತಗಳು ಉಂಟಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಬುಧವಾರ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ನೀರು ಹಾಯಿಸುವ ಕಾರ್ಯ ಆರಂಭದಲ್ಲಿಯೇ ಭೂಮಿಯ ಕೆಳ ಭಾಗದಲ್ಲಿ ಅಳವಡಿಸಿದ್ದ ಭಾರಿ ಗಾತ್ರದ ಪೈಪ್‌ಗಳು ಒಡೆದು ಪ್ರವಾಹದಂತೆ ನೀರು ಹರಿದು ರಸ್ತೆಗಳು ಬಿರುಕು ಬಿಟ್ಟಿದ್ದವು. ದೇಖ್ಲಾ ಗ್ರಾಮ ಸಮೀಪ ನೀರೆತ್ತುವ ಮೋಟರ್ ಸಮೀಪವೇ ಸೋರಿಕೆಯಾಗಿ ನೀರು ಚಿಮ್ಮಿತ್ತು. ಶುಕ್ರವಾರ ಎರಡನೇ ಹಂತದ ಪ್ರಾಯೋಗಿಕ ಕಾರ್ಯ ಆರಂಭಿಸಿದಾಗಲೂ ಪೈಪ್‌ಗಳು ಒಡೆದು ರಸ್ತೆಯಲ್ಲಿ ನೀರು ಹರಿದು ಪ್ರವಾಹ ಚಿತ್ರಣ ಕಾಣುವಂತೆ ಮಾಡಿತು.
ಸಕಲೇಶಪುರ ತಾಲೂಕು ಹಾರ್ಲೆ ಕೂಡಿಗೆ ಗ್ರಾಮದ ಬಳಿ ಪೈಪ್‌ಗಳು ಒಡೆದು ಭಾರಿ ಪ್ರಮಾಣದ ನೀರು ಬುಗ್ಗೆಯಂತೆ ಚಿಮ್ಮಿ ರಸ್ತೆ ಮೇಲೆಲ್ಲ ಹರಿಯುತ್ತಿತ್ತು. ಆ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಮುಂದೆ ಸಾಗಲಾಗದೇ ತಮ್ಮ ವಾಹನಗಳನ್ನು ಅಲ್ಲಿಯೇ ನಿಲ್ಲಿಸಿಕೊಂಡು ಕಾಮಗಾರಿ ನಡೆಸಿದವರಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಪ್ರಾಯೋಗಿಕವಾಗಿ ನೀರು ಹರಿಸಿದ ಕುಡಲೇ ನೀರು ಹರಿದ ರಭಸಕ್ಕೆ ತುಕ್ಕು ಹಿಡಿದಿದ್ದ ಪೈಪ್‌ಗಳು ಅಲ್ಲಲ್ಲಿ ಒಡೆದು ಅಕ್ಕಪಕ್ಕದ ರೈತರ ಜಮೀನಿಗೆ ಭಾರಿ ಪ್ರಮಾಣದಲ್ಲಿ ನುಗ್ಗಿ ಹಲವು ಪ್ರದೇಶಗಳಿಗೆ ಹಾನಿಯಾಗಿವೆ.
ಭೂಮಿಯೊಳಗೆ ಅವೈಜ್ಞಾನಿಕವಾಗಿ ಬೃಹತ್ ಗಾತ್ರದ ಪೈಪ್‌ಗಳ ಜೋಡಣೆ ಮಾಡಿದ್ದೇ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನೀರು ಹರಿದ ರಭಸಕ್ಕೆ ಹಲವೆಡೆ ಮತ್ತೆ ಭೂಮಿ ಕಂಪಿಸಿದ್ದು ಆ ಭಾಗದ ರಸ್ತೆ ಸಂಪರ್ಕ ಕಡಿತವಾಗಿದೆ. ಪೈಪ್‌ಲೈನ್ ಕಾಮಗಾರಿ ಮುಗಿದು ರಸ್ತೆ ದುರಸ್ತಿ ಮಾಡುವ ಮುನ್ನವೇ ಪೈಪ್‌ಗಳು ಒಡೆದು ಅನಾಹುತ ಸೃಷ್ಟಿಯಾಗಿದ್ದು ಈ ಯೋಜನೆಯ ಮೂಲ ಉದ್ದೇಶ ಫಲಪ್ರದವಾಗುವುದು ಅನುಮಾನ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.