ಹೊಸ ದಿಗಂತ ವರದಿ, ಹಾಸನ:
ಸಂಸದ ಪ್ರಜ್ವಲ್ ರೇವಣ್ಣ ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬುವುದು ಕೇವಲ ಜೆಡಿಎಸ್ ಪಕ್ಷದ ತೀರ್ಮಾನವಷ್ಟೆ, ಬಿಜೆಪಿ-ಜೆಡಿಎಸ್ ಮೈತ್ರಿಯ ತೀರ್ಮಾನವಲ್ಲ ಎಂದು ಹೊಳೆನರಸೀಪುರ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ. 1ರಂದು ಹೊಳೆನರಸೀಪುರ ತಾಲೂಕು ಶ್ರೀರಾಮದೇವರ ಕಟ್ಟೆಯಲ್ಲಿ ಜೆಡಿಎಸ್ ಮುಖಂಡ ಹಾಗೂ ಕಾರ್ಯಕರ್ತರ ಸಭೆಯನ್ನು ಏರ್ಪಡಿಸಿದ್ದರು. ಆ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರು ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಂಸದ ಪ್ರಜ್ವಲ್ ರೇವಣ್ಣ ಅವರೇ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಜಂಟಿಯಾಗಿ ಸಂಸದ ಪ್ರಜ್ವಲ್ ರೇವಣ್ಣ ಅವರೇ ಮುಂದಿನ ಲೋಕಸಭಾ ಚುನಾವಣೆ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರೆ ಅದು ಅಧಿಕೃತ, ಬಿಜೆಪಿ ಪಕ್ಷದ ಯಾವ ಒಬ್ಬ ಮುಖಂಡರು ಇಲ್ಲದ ಜೆಡಿಎಸ್ ಪಕ್ಷದ ಸಭೆಯಲ್ಲಿ ಈ ರೀತಿ ಘೋಷಣೆ ಮಾಡಿರುವುದು ಅಧಿಕೃತವಲ್ಲ. ಈಗ ಅವರು ಬರೀ ಜೆಡಿಎಸ್ ಅಭ್ಯರ್ಥಿ ಮಾತ್ರ. ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಗೊಂದಲವಾಗುವುದು ಬೇಡ ಎಂದು ಹೇಳಿದರು.
ಬಿಜೆಪಿ ಪಕ್ಷವು ತನ್ನದೆ ಆದ ನಿಯಮಗಳನ್ನು ಹೊಂದಿರುವ ಪಕ್ಷ. ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಸ್ಪರ್ಧೆ ಮಾಡಬೇಕು ಎಂದು ರಾಜ್ಯ ಹಾಗೂ ರಾಷ್ಟ್ರ ನಾಯಕರು ಕೂಡ ತೀರ್ಮಾನ ಮಾಡಿಲ್ಲ., ಎಲ್ಲಿಯೂ ಹೇಳಿಲ್ಲ. ಮೈತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ದೇವೆಗೌಡರು ಸ್ಥಳೀಯವಾಗಿರುವ ನಮ್ಮ ಬಿಜೆಪಿ ನಾಯಕರು ಇದ್ದಾರೆ. ಜಿಲ್ಲೆಯಲ್ಲಿ ಆರು ಲಕ್ಷಗಳ ಮತಗಳನ್ನು ಬಿಜೆಪಿಗೆ ನೀಡಿದ್ದಾರೆ. ಸ್ಥಳೀಯ ನಾಯಕರ ಗಮನಕ್ಕೂ ತರದೆ, ಜಿಡಿಎಸ್ ನಾಯಕರ ನೇತೃತ್ವದಲ್ಲಿ ಎನ್ ಡಿ ಎ ಮೈತ್ರಿ ಕೂಟದ ಅಭ್ಯರ್ಥಿ ಎಂದು ಘೋಷಣೆ ಮಾಡಲು ಯಾವ ನೈತಿಕತೆಯು ಇಲ್ಲ ಎಂದು ಆರೋಪ ಮಾಡಿದರು.
ಹಾಸನ ಜಿಲ್ಲೆಯ ಬಿಜೆಪಿ ಮುಖಂಡರು ಕಾರ್ಯಕರ್ತರು ಗೊಂದಲವಾಗುವುದು ಬೇಡ. ಪ್ರಜ್ವಲ್ ರೇವಣ್ಣ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯಲ್ಲ. ಎರಡು ಪಕ್ಷಗಳುಸೇರಿ ಘೋಷಣೆ ಮಾಡಿದಾಗ ಮಾತ್ರ ಅವರು ಎನ್ ಡಿ ಎ ಮೈತ್ರಿಯಾಗುತ್ತಾರೆ. ಮತ್ತೊಮ್ಮೆ ಹೇಳುತ್ತೇನೆ ಈಗ ಅವರು ಬರಿ ಜೆಡಿಎಸ್ ಅಭ್ಯರ್ಥಿ ಮಾತ್ರ ಎಂದು ಹೇಳಿದರು.